ಬೆಳ್ಳಿ–ಬಂಗಾರದ ಸಾಲಿಗೆ ಈಗ ತೆಂಗಿನವೂ ಸೇರ್ಪಡೆಯಾಗಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಗಳಲ್ಲಿ ಒಂದಾದ ಅರಸೀಕೆರೆ ಹಾಗೂ ತಿಪಟೂರಿನಲ್ಲಿ ಉಂಡೆ ಕೊಬ್ಬರಿ ದರ ಐತಿಹಾಸಿಕ ದಾಖಲೆ ಬರೆದಿದೆ. ಕಳೆದ ಒಂದು ವರ್ಷದಿಂದ ಕೊಬ್ಬರಿ ಬೆಲೆ ನಿರಂತರ ಏರಿಕೆ ಕಾಣುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಫೆಬ್ರವರಿ 2ರಂದು ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಲ್ ಕೊಬ್ಬರಿ ರೂ.30,400ಕ್ಕೆ ಟೆಂಡರ್ ಆಗಿದ್ದರೆ, ಫೆಬ್ರವರಿ 3ರಂದು ಅರಸೀಕೆರೆ ಮಾರುಕಟ್ಟೆಯಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ರೂ.30,488ಕ್ಕೆ ಮಾರಾಟವಾಗಿದೆ. ಇದುವರೆಗೆ ದಾಖಲಾಗಿದ್ದ ಗರಿಷ್ಠ ಬೆಲೆ 10 ವರ್ಷಗಳ ಹಿಂದೆ ಒಂದೇ ದಿನ ರೂ.19,600 ಮಾತ್ರವಾಗಿತ್ತು.
ಕೊಬ್ಬರಿ ಬೆಲೆ ಏರಿಕೆಗೆ ಹಲವು ಕಾರಣಗಳಿವೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಹಿರಿಯೂರು, ಹಾಸನದ ಅರಸೀಕೆರೆ, ತುಮಕೂರು ಜಿಲ್ಲೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ತೆಂಗಿನ ಮರಗಳು ಕಪ್ಪುತಲೆ ಹುಳು ಹಾಗೂ ಬಿಳಿಹುಳುಗಳ ಬಾಧೆಗೆ ತುತ್ತಾಗಿವೆ. ಸಾವಿರಾರು ಮರಗಳು ಒಣಗಿ ನಿಂತಿದ್ದು, ಇಳುವರಿ ಭಾರೀ ಪ್ರಮಾಣದಲ್ಲಿ ಕುಸಿದಿದೆ.
ಹತ್ತಾರು ವರ್ಷಗಳಿಂದ ಕಾಪಾಡಿಕೊಂಡಿದ್ದ ತೆಂಗಿನ ತೋಟಗಳೇ ಈಗ ರೋಗಕ್ಕೆ ಆಹುತಿಯಾಗುತ್ತಿರುವುದು ರೈತರ ಆತಂಕ ಹೆಚ್ಚಿಸಿದೆ. ಇತ್ತೀಚೆಗೆ ಎಳನೀರು ಮತ್ತು ತೆಂಗಿನಕಾಯಿಗೆ ಉತ್ತಮ ದರ ದೊರೆಯುತ್ತಿರುವುದರಿಂದ ರೈತರು ಕೊಬ್ಬರಿ ಮಾಡದೇ ನೇರವಾಗಿ ಎಳನೀರು ಹಾಗೂ ಕಾಯಿ ಮಾರಾಟಕ್ಕೆ ಮುಂದಾಗಿದ್ದಾರೆ.
ಎಳನೀರಿಗೆ ರೂ.40–50 ಹಾಗೂ ತೆಂಗಿನಕಾಯಿಗೆ ರೂ.50–60 ಸಿಗುತ್ತಿರುವುದರಿಂದ ತಕ್ಷಣ ಹಣ ಕೈಗೆ ಬರುತ್ತಿದೆ. ಇದರಿಂದ ಕೊಬ್ಬರಿ ಉತ್ಪಾದನೆ ಕಡಿಮೆಯಾಗಿ ಮಾರುಕಟ್ಟೆಯಲ್ಲಿ ಸರಬರಾಜು ಇಳಿಕೆಯಾಗಿದೆ. ಕೊಬ್ಬರಿಯ ಜೊತೆಗೆ ತೆಂಗಿನ ಚಿಪ್ಪಿಗೂ ಈಗ ಭಾರೀ ಡಿಮ್ಯಾಂಡ್ ಇದೆ. ಮನೆ ಮನೆಗೆ ವಾಹನಗಳು ಬಂದು ಚಿಪ್ಪು ಖರೀದಿಸುತ್ತಿವೆ. ಪ್ರತಿ ಚಿಪ್ಪಿಗೆ ರೂ.1 ರಿಂದ 1.50, ಹಾಗೂ ಪ್ರತಿ ಕೆಜಿ ತೆಂಗಿನ ಚಿಪ್ಪು ರೂ.26 ರಿಂದ 35ರವರೆಗೆ ಮಾರಾಟವಾಗುತ್ತಿದೆ.




