ಭಾರತ್ ಟ್ಯಾಕ್ಸಿ ಲಾಂಚ್ ಮಾಡಿದ ಅಮಿತ್ ಶಾ!

ಖಾಸಗಿ ವಲಯದ ಓಲಾ, ಉಬರ್ ಹಾಗೂ ರ್ಯಾಪಿಡೋ ಸಂಸ್ಥೆಗಳೊಂದಿಗೆ ಸ್ಪರ್ಧಿಸಲು ಕೇಂದ್ರ ಸರ್ಕಾರ ‘ಭಾರತ್ ಟ್ಯಾಕ್ಸಿ’ ಎಂಬ ಹೊಸ ಕ್ಯಾಬ್ ಬುಕಿಂಗ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಕೇಂದ್ರ ಸಹಕಾರಿ ಇಲಾಖೆ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಅಧಿಕೃತವಾಗಿ ಈ ಅಪ್ಲಿಕೇಶನ್ ಬಿಡುಗಡೆಗೊಳಿಸಿದರು. ಪ್ರಾರಂಭಿಕ ಹಂತದಲ್ಲಿ ದೆಹಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶ ಹಾಗೂ ಗುಜರಾತ್ ರಾಜ್ಯಗಳಲ್ಲಿ ಸೇವೆ ಆರಂಭವಾಗಲಿದೆ.

ಮುಂದಿನ ಮೂರು ವರ್ಷಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ದ್ವಾರಕಾದಿಂದ ಅಸ್ಸಾಂವರೆಗೂ ಭಾರತ್ ಟ್ಯಾಕ್ಸಿ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಅಮಿತ್ ಶಾ ತಿಳಿಸಿದ್ದಾರೆ. ಭಾರತ್ ಟ್ಯಾಕ್ಸಿಯ ಪ್ರಮುಖ ವೈಶಿಷ್ಟ್ಯವೆಂದರೆ ಶೂನ್ಯ ಕಮಿಷನ್ ಮಾದರಿ. ಇದರಿಂದ ಸಂಪೂರ್ಣ ಲಾಭ ಚಾಲಕರಿಗೆ ದೊರೆಯಲಿದೆ. ಈ ಅಪ್ಲಿಕೇಶನ್ ಮೂಲಕ ಗ್ರಾಹಕರು ಕಾರು, ತ್ರಿಚಕ್ರ ವಾಹನ ಹಾಗೂ ದ್ವಿಚಕ್ರ ವಾಹನಗಳನ್ನು ಬುಕ್ ಮಾಡಬಹುದಾಗಿದೆ.

ಈಗಾಗಲೇ ದೇಶದಲ್ಲಿ ಉಬರ್, ಓಲಾ ಮತ್ತು ರ್ಯಾಪಿಡೋ ಪ್ರಮುಖ ಕ್ಯಾಬ್ ಸೇವೆಗಳಾಗಿದ್ದು, ಇವು ಚಾಲಕರಿಂದ ಕಮಿಷನ್ ವಸೂಲಿ ಮಾಡುತ್ತಿವೆ. ಚಾಲಕರ ಪರಿಶ್ರಮವನ್ನು ಕಂಪನಿಗಳು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂಬ ಆರೋಪಗಳು ಮರುಮರು ಕೇಳಿಬಂದ ಹಿನ್ನೆಲೆ, ಕೇಂದ್ರ ಸರ್ಕಾರ ಕಳೆದ ವರ್ಷದ ಜೂನ್ 5ರಂದು ಬಹುರಾಜ್ಯ ಸಹಕಾರ ಸಂಘಗಳ ಕಾಯ್ದೆಯಡಿ ‘ಭಾರತ್ ಟ್ಯಾಕ್ಸಿ’ ಯೋಜನೆಯನ್ನು ರೂಪಿಸಿದೆ.

ಇದುವರೆಗೆ ಮೂರು ಲಕ್ಷಕ್ಕೂ ಹೆಚ್ಚು ಚಾಲಕರು ಭಾರತ್ ಟ್ಯಾಕ್ಸಿ ವೇದಿಕೆಗೆ ಸೇರಿದ್ದಾರೆ. ಸುಮಾರು ಒಂದು ಲಕ್ಷ ಬಳಕೆದಾರರು ಈಗಾಗಲೇ ನೋಂದಾಯಿಸಿದ್ದು, ದಿನಕ್ಕೆ ಸರಾಸರಿ 10 ಸಾವಿರಕ್ಕೂ ಹೆಚ್ಚು ಸವಾರಿಗಳು ನಡೆಯುತ್ತಿವೆ. ಚಾಲಕರು ಇದುವರೆಗೆ ಸುಮಾರು 10 ಕೋಟಿ ರೂಪಾಯಿ ಲಾಭ ಪಡೆದಿದ್ದಾರೆ ಎಂದು ಕೇಂದ್ರ ಸಹಕಾರಿ ಸಚಿವಾಲಯ ಮಾಹಿತಿ ನೀಡಿದೆ.

ಇದಲ್ಲದೆ, ವಾಹನ ಚಾಲಕರಿಗೆ ‘ಸಾರಥಿ’ ಯೋಜನೆಯಡಿ ಆರೋಗ್ಯ ವಿಮೆ, ಅಪಘಾತ ವಿಮೆ ಹಾಗೂ ನಿವೃತ್ತಿ ಉಳಿತಾಯ ಸೌಲಭ್ಯಗಳನ್ನೂ ಒದಗಿಸಲಾಗುತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author