ತಮಿಳುನಾಡು ಗೆಲ್ಲೋಕೆ TVK ಡಬಲ್ ಗೇಮ್?

ಈ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ–ರಾಜಕಾರಣಿ ವಿಜಯ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು TVK ಪಕ್ಷದ ಮೂಲಗಳು ಮಾಹಿತಿ ನೀಡಿವೆ. ಇದು TVK ಪಕ್ಷದ ವಿಜಯ್ ಅವರಿಗೆ ಮೊದಲ ವಿಧಾನಸಭಾ ಚುನಾವಣಾ ಹೋರಾಟವಾಗಲಿದೆ.

ರಾಜಕೀಯ ಪ್ರವೇಶದ ನಂತರ ವಿಜಯ್ ಚುನಾವಣಾ ಕಣಕ್ಕೆ ಇಳಿಯುವ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಮೂಲಕ ರಾಜಕೀಯ ಪಾದಾರ್ಪಣೆ ಬಲಪಡಿಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಅವರು ಹಲವು ಕ್ಷೇತ್ರಗಳ ಬಗ್ಗೆ ಆಂತರಿಕ ಸಮೀಕ್ಷೆ ಹಾಗೂ ಚರ್ಚೆ ನಡೆಸುತ್ತಿದ್ದಾರೆ.

2021ರಲ್ಲಿ ನಡೆದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಜಯ್ ಅಭಿಮಾನಿ ಸಂಘವಾಗಿದ್ದ ‘ವಿಜಯ್ ಮಕ್ಕಳ್ ಇಯಕ್ಕಂ’ ಸ್ಪರ್ಧಿಸಿದ್ದ 115 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಈ ಫಲಿತಾಂಶಗಳು ವಿಜಯ್ ಅವರ ರಾಜಕೀಯ ಶಕ್ತಿಗೆ ಬಲ ನೀಡಿದ್ದವು.

ವಿಜಯ್ ಸ್ಪರ್ಧೆ ಪರಿಗಣಿಸುತ್ತಿರುವ ಕ್ಷೇತ್ರಗಳಲ್ಲಿ ಚೆನ್ನೈನ ವೆಲಚೇರಿ ಮತ್ತು ವಿರುಂಬಾಕ್ಕಂ, ವಿಕ್ರವಂಡಿ, ನಾಗಪಟ್ಟಿಣಂನ ವೇದರಣ್ಯಂ ಮತ್ತು ಕರೂರಿನ ವೇದಸಂದೂರ್ ಕ್ಷೇತ್ರದಲ್ಲಿ ಸ್ಪರ್ಧೆಯ ಸಾಧ್ಯತೆಯನ್ನು ವಿಜಯ್ ಪರಿಶೀಲಿಸುತ್ತಿದ್ದಾರೆ. ಈ ಕ್ಷೇತ್ರಗಳಲ್ಲಿ ಜನಮನ್ನಣೆ, ಪಕ್ಷದ ಸಂಘಟನೆ ಹಾಗೂ ಗೆಲುವಿನ ಸಾಧ್ಯತೆಗಳ ಬಗ್ಗೆ ವಿಜಯ್ ಆಪ್ತ ವಲಯದಲ್ಲಿ ಸಮಾಲೋಚನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ದಿನಗಳಲ್ಲಿ ಟಿವಿಕೆ ಪಕ್ಷದಿಂದ ಅಭ್ಯರ್ಥಿತ್ವ ಹಾಗೂ ಸ್ಪರ್ಧಾ ಕ್ಷೇತ್ರಗಳ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ವಿಜಯ್ ಅವರ ಈ ರಾಜಕೀಯ ಹೆಜ್ಜೆ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗುವ ನಿರೀಕ್ಷೆಯಿದೆ.

ವರದಿ : ಲಾವಣ್ಯ ಅನಿಗೋಳ

About The Author