ರಾಜ್ಯ ಬಜೆಟ್ ಘೋಷಣೆಯ ಬೆನ್ನಲ್ಲೇ ‘ಗದ್ದುಗೆ ಬದಲಾವಣೆ’ ಚರ್ಚೆ ಮತ್ತೆ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ. ಇದೇ ವೇಳೆ ಕೋಡಿಮಠದ ಶ್ರೀಗಳ ಭವಿಷ್ಯ ನುಡಿಗಳು ಹೊಸ ಕುತೂಹಲಕ್ಕೆ ಕಾರಣವಾಗಿವೆ. ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿತು.
ಅದರಲ್ಲಿ ಪ್ರಮುಖವಾಗಿ 2026ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 6ರ ಶುಕ್ರವಾರ ಮುಖ್ಯಮಂತ್ರಿ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಹಿಂದಿನ ಭವಿಷ್ಯ ನುಡಿಗಳು ಮತ್ತೆ ಚರ್ಚೆಗೆ ಗ್ರಾಸವಾಗಿವೆ.
ರಾಜಕೀಯ ಬದಲಾವಣೆಗಳ ಬಗ್ಗೆ ಮಾತನಾಡಿದ್ದ ಸ್ವಾಮೀಜಿ, ಸಿದ್ದರಾಮಯ್ಯ ಅವರು ಸ್ವಯಂ ಇಚ್ಛೆಯಿಂದ ಅಧಿಕಾರ ತ್ಯಜಿಸಿದರೆ ಮಾತ್ರ ಹಸ್ತಾಂತರ ಸಾಧ್ಯ. ಬಲವಂತದಿಂದ ಅವರನ್ನು ಇಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಮಕರ ಸಂಕ್ರಾಂತಿ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮಾತನಾಡಿದ್ದ ಸ್ವಾಮೀಜಿ, ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಬಲವಾದ ಆಶೀರ್ವಾದವಿದೆ. ಅವರು ಸ್ವಯಂ ನಿರ್ಧಾರ ತೆಗೆದುಕೊಂಡರೆ ಮಾತ್ರ ಬದಲಾವಣೆ ಸಾಧ್ಯ. ಯಾವುದೇ ಮಹತ್ತರ ರಾಜಕೀಯ ಬದಲಾವಣೆ ಇದ್ದರೆ, ಅದು ಬಜೆಟ್ ನಂತರವೇ, ಎಂದು ಅಭಿಪ್ರಾಯಪಟ್ಟಿದ್ದರು.
ಇನ್ನೊಂದೆಡೆ, ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಹೈಕಮಾಂಡ್ನ್ನು ಭೇಟಿ ಮಾಡಿ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ. ದೆಹಲಿ ಭೇಟಿಯ ನಂತರ ಡಿಸಿಎಂ ಆತ್ಮವಿಶ್ವಾಸದಿಂದ ಕಾಣಿಸಿಕೊಂಡಿದ್ದಾರೆ ಎನ್ನುವುದು ರಾಜಕೀಯ ವಲಯದ ವಿಶ್ಲೇಷಣೆ. ಇದಕ್ಕೂ ಮಧ್ಯೆ, ಮುಖ್ಯಮಂತ್ರಿಗಳ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಪೂರ್ಣಾವಧಿಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ. ಇದು ಚರ್ಚೆಯ ವಿಷಯವಲ್ಲ. ಹೈಕಮಾಂಡ್ ಸಮ್ಮುಖದಲ್ಲಿ ವಿಷಯ ಇತ್ಯರ್ಥವಾಗಿದೆ ಎಂದು ಸ್ಪಷ್ಟಪಡಿಸಿದರು.
ಬಜೆಟ್ ದಿನಾಂಕ ಪ್ರಕಟಣೆ, ಕೋಡಿಮಠದ ಶ್ರೀಗಳ ಭವಿಷ್ಯ ನುಡಿಗಳು ಮತ್ತು ದೆಹಲಿ ರಾಜಕೀಯ ಚಟುವಟಿಕೆಗಳು – ಈ ಎಲ್ಲ ಬೆಳವಣಿಗೆಗಳು ಒಟ್ಟಾಗಿ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. ಒಟ್ಟಾರೆ, ಬಜೆಟ್ ನಂತರ ರಾಜಕೀಯದಲ್ಲಿ ಏನಾದರೂ ಬದಲಾವಣೆ ಸಂಭವಿಸಬಹುದೇ ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಪ್ರಮುಖ ಚರ್ಚೆಯಾಗಿ ಉಳಿದಿದೆ.
ವರದಿ : ಲಾವಣ್ಯ ಅನಿಗೋಳ




