ಡಾ.ಪುನೀತ್ ರಾಜಕುಮಾರ್ ಅವರ ಬದುಕಿನ ಕಥೆ ಶಾಲಾ ಪಠ್ಯದಲ್ಲಿ ಸ್ಥಾನ ಪಡೆದಿರುವುದು ಗೊತ್ತೇ ಇದೆ. ಇದೀಗ ಅದಕ್ಕೆ ಚಾಲನೆ ಸಿಗುವ ಎಲ್ಲಾ ಲಕ್ಷಣಗಳೂ ಸೇರುತ್ತಿವೆ. ಹೌದು, ಅಪ್ಪು ಅಭಿಮಾನಿಗಳ ಬಹುದಿನಗಳ ಬೇಡಿಕೆಯೊಂದು ಈಡೇರಿದೆ. ಇನ್ನೇನು ಕೆಲವೇ ದಿನಗಳಲ್ಲಿ ಫ್ಯಾನ್ಸ್ ಕೈಯಲ್ಲೂ ಅಪ್ಪು ಅವರ ಬದುಕಿನ ಕಥೆ ಇರುವ ಶಾಲೆಯ ಪಠ್ಯ ಪುಸ್ತಕ ಸಿಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದ ಶಾಲೆಗಳ ಕನ್ನಡ ಪಠ್ಯದಲ್ಲಿ ಪುನೀತ್ ರಾಜಕುಮಾರ್ ಅವರ ಬಾಲ್ಯ, ಸಿನಿಮಾ, ಪ್ರಶಸ್ತಿ ಪುರಸ್ಕಾರ, ಸಾಧನೆ, ಸಾಮಾಜಿಕ ಸೇವೆ ಇತ್ಯಾದಿ ಅಪರೂಪದ ಕೆಲಸಗಳ ವಿಚಾರಗಳು ಅಡಕವಾಗಿರಲಿವೆ. ಇಂಥದ್ದೊಂದು ಮಹತ್ತರವಾದ ಆದೇಶವನ್ನು ರಾಜ್ಯ ಸರ್ಕಾರ ಈಗಾಗಲೇ ಮಾಡಿದ್ದಾಗಿದೆ. ಇನ್ನೇನು ಬರುವ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಅಪ್ಪು ಸಿನಿಮಾ, ಪ್ರಶಸ್ತಿ, ಸಾಧನೆ ಮತ್ತು ಅವರ ಸಾಮಾಜಿಕ ಸೇವೆ ಕುರಿತ ಮಾಹಿತಿಯನ್ನು ಪಠ್ಯದ ಮೂಲಕ ತಿಳಿದುಕೊಳ್ಳಲ್ಲಿದ್ದಾರೆ.
ಇಷ್ಟಕ್ಕೂ ಇಂಥದ್ದೊಂದು ಬೆಳವಣಿಗೆಗೆ ಕಾರಣ ಆಗಿದ್ದು ಬೇರಾರೂ ಅಲ್ಲ, ಅಪ್ಪು ಅವರ ಅಪ್ಪಟ ಅಭಿಮಾನಿ. ಹೌದು, ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ, ತಲಕಾಡು ಹೋಬಳಿಯ ಮುಡುಕುತೊರೆ ಗ್ರಾಮದ ದೇವರಾಜ್ ಅರಸು. ಅಪ್ಪು ಅಂದರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಅವರಿದ್ದಾಗ ಯಾವ ರೀತಿ ಪ್ರೀತಿ ತೋರಿಸುತ್ತಿದ್ದರೋ, ಅದೇ ಪ್ರೀತಿಯನ್ನು ಈಗಲೂ ತೋರುತ್ತಿದ್ದಾರೆ. ಪುನೀತ್ ಅವರು ನಿಧನರಾದ ಹನ್ನೊಂದನೇ ದಿನದಲ್ಲಿ ಅಪ್ಪು ಅವರ ಅಭಿಮಾನಿಯಾಗಿರುವ ದೇವರಾಜ್ ಅರಸು, ಪುನೀತ್ ರಾಜಕುಮಾರ್ ಅವರ ಬದುಕು, ಸಾಧನೆ, ಸಿನಿಮಾ, ಪ್ರಶಸ್ತಿ ಇತರೆ ಸಾಮಾಜಿಕ ಸೇವೆ ಕುರಿತು ಪಠ್ಯದಲ್ಲಿ ಅಳವಡಿಸುವ ಮೂಲಕ ಮುಂದಿನ ಪೀಳಿಗೆಗೂ ಅವರ ಸರಳತೆ ಪರಿಚಯಿಸಬೇಕು ಎಂಬ ಉದ್ದೇಶ ಹೇಳಿಕೊಂಡರು. ಹಾಗಾಗಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಅವರ ಸಮಾಧಿ ಬಳಿ ಸಹಿಸಂಗ್ರಹ ಅಭಿಯಾನ ಶುರು ಮಾಡಿದರು. ಅದಕ್ಕೆ ಸಿಕ್ಕ ಬೆಂಬಲ ಅಪಾರ. ಅಲ್ಲಿಂದ ಶುರುವಾದ ಅವರ ಈ ಬೇಡಿಕೆಯ ಹೋರಾಟಕ್ಕೆ ಬರೋಬ್ಬರಿ ನಾಲ್ಕು ವರ್ಷಕ್ಕೆ ಜಯಸಿಕ್ಕಿತು.
ಪುನೀತ್ ರಾಜಕುಮಾರ್ ಅವರ ಬದುಕಿನ ಕಥೆ ಪಠ್ಯ ಪುಸ್ತಕಕ್ಕೆ ಸೇರ್ಪಡೆಯಾದ ಖುಷಿಯ ಹಿಂದೆ ಸಾಕಷ್ಟು ಓಡಾಟ ಮತ್ತು ಹೋರಾಟವಿದೆ. ದೇವರಾಜು ಅರಸು ಬಾಲ್ಯದಿಂದಲೂ ಅಪ್ಪು ಅವರ ಫ್ಯಾನ್. ಅವರ ಅನೇಕ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು. ಅಪ್ಪು ಯಾವಾಗ ಅಗಲಿದರೋ, ದೇವರಾಜು ಅರಸ್ ಅವರಿಗೆ ಪುನೀತ್ ರಾಜಕುಮಾರ್ ಅವರ ಬಾಲ್ಯ, ಸಿನಿಮಾ, ಪ್ರಶಸ್ತಿ, ಸಾಧನೆ, ಸಾಮಾಜಿಕ ಸೇವೆ ಕುರಿತು ಶಾಲೆ ಪಠ್ಯದಲ್ಲಿ ಸೇರಿಸಲು ಸರ್ಕಾರಕ್ಕೆ ಮನವಿ ಮಾಡುವ ತೀರ್ಮಾನ ಮಾಡಿದರು. ಅವರಿಗೆ ಬೆಂಬಲವಾಗಿ ನಿಂತಿದ್ದು ಅವರ ಒಂದಷ್ಟು ಆಪ್ತ ಗೆಳೆಯರು, ಅಪ್ಪು ಫ್ಯಾನ್ಸ್. ಇವರ ಜೊತೆ ನಾಡಿನ ಸಮಸ್ತ ಕನ್ನಡಿಗರು. ಅಪ್ಪು ಸಾಧನೆ ಕುರಿತು ವಿಡಿಯೋವೊಂದನ್ನು ಮಾಡಿ ಜನರ ಬಳಿ ಹೋಗಿ ತೋರಿಸಿ ಅವರಿಂದ ಅಭಿಪ್ರಾಯ ಸಂಗ್ರಹಿಸಿ, ಅದನ್ನು ಸರ್ಕಾರದ ಮಟ್ಟಕ್ಕೆ ತಲುಪಿಸೋ ಕೆಲಸವನ್ನು ದೇವರಾಜು ಅರಸು ಮಾಡಿದರು.
ದೇವರಾಜು ಅರಸು ಇಂಥದ್ದೊಂದು ಆಶಯ ಇಟ್ಟುಕೊಂಡು ಮೊದಲು ಹೋಗಿದ್ದು ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯ ಅವರ ಬಳಿ. ದೇವರಾಜು ಹೇಳಿದ ಅಪ್ಪು ಸಾಧನೆಯ ವಿಚಾರಧಾರೆ ಪಠ್ಯದಲ್ಲಿದ್ದರೆ ಮುಂದಿನ ಪೀಳಿಗೆಗೂ ಅದು ಪರಿಚಯವಾಗುತ್ತೆ. ಈ ಎಲ್ಲ ಅಂಶಗಳು ಇರಬೇಕು ಅಂತ ಬೆಂಬಲ ಸೂಚಿಸಿ, ಸಾಥ್ ಕೊಟ್ಟಿದ್ದು ಸಿದ್ಧರಾಮಯ್ಯ. ಅಲ್ಲಿಂದ ಯಡಿಯೂರಪ್ಪ, ಬೊಮ್ಮಾಯಿ, ಫಿಲ್ಮ್ ಚೇಂಬರ್, ಕನ್ನಡ ಸಾಹಿತ್ಯ ಪರಿಷತ್ ಹೀಗೆ ಎಲ್ಲೆಡೆ ಅಲೆದಾಡಿದ ದೇವರಾಜು ಅರಸು, ಅವರೆಲ್ಲರ ಬೆಂಬಲ ಪಡೆದರು. ಆದರೆ, ವರ್ಷಗಳು ಉರುಳುತ್ತ ಬಂದರೂ ಅವರ ಆಶಯಕ್ಕೆ ಕಿಮ್ಮತ್ತಿನ ಬೆಲೆ ಸಿಗಲಿಲ್ಲ. ಸ್ಪಂದಿಸುವವರೂ ಇಲ್ಲದಂತಾಯಿತು. ಕೊನೆಗೆ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಅವರ ಬಳಿ ಹೋದ ದೇವರಾಜ್ ಅರಸು, ಅಪ್ಪು ಬದುಕಿನ ಕಥೆ ಪಠ್ಯದಲ್ಲಿರಬೇಕು. ಸೇರಿಸಲು ಸೂಚಿಸಬೇಕು. ಈಗಾಗಲೇ ಸಿದ್ಧರಾಮಯ್ಯ ಅವರೂ ಸಹ ಬೆಂಬಲ ನೀಡಿದ್ದರು ಅಂತ ಮನವರಿಕೆ ಮಾಡಿಕೊಟ್ಟ ನಂತರ, ಮಧು ಬಂಗಾರಪ್ಪ ಅವರೂ ಸಹ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲಾಖೆಯಿಂದ ಪಠ್ಯದಲ್ಲಿ ಅಪ್ಪು ಅವರ ಬದುಕಿನ ಚಿತ್ರಣವನ್ನು ಸೇರಿಸುವ ಕುರಿತು ಆದೇಶವೊಂದು ದೇವರಾಜು ಅರಸು ಅವರ ಕೈ ಸೇರಿತು.
ಅಲ್ಲಿಗೆ ದೇವರಾಜು ಅರಸು ಕಳೆದ ನಾಲ್ಕು ವರ್ಷಗಳಿಂದ ನಡೆಸಿದ ಬೇಡಿಕೆಯ ಹೋರಾಟ, ಮನವಿಗೆ ಕೊನೆಗೂ ಜಯ ಸಿಕ್ಕಂತಾಯ್ತು. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಪುನೀತ್ ರಾಜಕುಮಾರ್ ಅವರ ಬಾಲ್ಯ, ಸಿನಿಮಾ, ಬದುಕು, ಸಾಮಾಜಿಕ ಸೇವೆ ಕುರಿತ ವಿಚಾರಧಾರೆಗಳು ಗದ್ಯಭಾಗದಲ್ಲಿರಬೇಕು ಅನ್ನುವುದು ದೇವರಾಜ್ ಅರಸು ಅವರ ಒತ್ತಾಯ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಸಂಬಂಧಿಸಿದ ಸಚಿವರು, ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡುವ ಯೋಚನೆ ಅವರಿಗಿದೆ. ಅದೇನೆ ಇರಲಿ, ಡಾ.ರಾಜಕುಮಾರ್ ಅವರ ವಿಚಾರ ಕುರಿತು ಕನ್ನಡದ ಆರನೇ ತರಗತಿ ಪಠ್ಯದಲ್ಲಿದೆ. ಅವರ ಜೊತೆ ಪುನೀತ್ ರಾಜಕುಮಾರ್ ಅವರ ವಿಚಾರಧಾರೆಗಳೂ ಸಹ ಗದ್ಯಭಾಗದಲ್ಲಿದ್ದರೆ ಚೆನ್ನಾಗಿರುತ್ತೆ. ದೇಶದಲ್ಲೇ ಇದು ಅಪರೂಪದಲ್ಲಿ ಅಪರೂಪ. ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿ ಹೋರಾಟ ಮಾಡಿ, ಕೊನೆಗೂ ಅಪ್ಪು ಸಾಧನೆಯನ್ನು ಶಾಲೆ ಪಠ್ಯದಲ್ಲಿ ಅಳವಡಿಸಲು ಜಯ ಸಾಧಿಸಿರುವ ದೇವರಾಜು ಅರಸ್ ಅವರಿಗೆ ಎಲ್ಲೆಡೆಯಿಂದ ಮೆಚ್ಚುಗೆ ಬರುತ್ತಿದೆ. ಅತ್ತ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಹ ಇವರ ಕೆಲಸವನ್ನು ಕೊಂಡಾಡಿದ್ದಾರೆ. ಮಹಾನ್ ಸಾಧಕರ, ಅಪರೂಪದ ವ್ಯಕ್ತಿಗಳ ಪರಿಚಯ ಪಠ್ಯದಲ್ಲಿರುವಂತೆ ಇನ್ಮುಂದೆ ಪುನೀತ್ ಅವರ ವಿಚಾರಧಾರೆಗಳೂ ಪಠ್ಯದಲ್ಲಿ ಲಭ್ಯವಾಗಲಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್ 17 ಅಪ್ಪು ಅವರ ಹುಟ್ಟುಹಬ್ಬ. ಅಂದು ಅಧಿಕೃತವಾಗಿಯೇ ಪಠ್ಯದಲ್ಲಿ ಅಪ್ಪು ವಿಚಾರಗಳು ಪಠ್ಯದಲ್ಲಿ ಲಭ್ಯವಾದರೂ ಅಚ್ಚರಿ ಇಲ್ಲ.



