ಹೊರಾಸಿಯೊ ಸೈಕ್ಲೋನ್ ಅಬ್ಬರಕ್ಕೆ ರಾಜ್ಯದಲ್ಲಿ ವರುಣನ ಆರ್ಭಟ!

ದೇಶದಲ್ಲಿ ಹವಾಮಾನದ ಸ್ವರೂಪ ದಿಢೀರ್ ಬದಲಾಗುತ್ತಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ವ್ಯವಸ್ಥೆ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಿಗೆ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕಕ್ಕೂ ಮಳೆಯ ಅಲರ್ಟ್ ಜಾರಿಯಾಗಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಹೊರಾಸಿಯೊ ಚಂಡಮಾರುತದ ಅಬ್ಬರ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಹೆಚ್ಚಳ ಕಂಡಿದ್ದು, ಇದರ ಪ್ರಭಾವದಿಂದ ಸಮುದ್ರದ ಮೇಲ್ಮೈ ವಾತಾವರಣದಲ್ಲಿ ಅಸ್ಥಿರತೆ ಉಂಟಾಗಿದೆ. ಚಂಡಮಾರುತವು ಸಮುದ್ರಮಟ್ಟದಿಂದ ಸುಮಾರು 5.8 ಕಿ.ಮೀ ಎತ್ತರದವರೆಗೆ ವಿಸ್ತರಿಸಿರುವುದಾಗಿ ಇಲಾಖೆ ತಿಳಿಸಿದೆ.

ನೈರುತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹವಾಮಾನದಲ್ಲೂ ಬದಲಾವಣೆ ಕಂಡುಬಂದಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಮುಂದಿನ ಗಂಟೆಗಳಲ್ಲಿ ರಾಜ್ಯದ ಕೆಲವೆಡೆ ಗುಡುಗು ಸಹಿತ ಭಾರೀ ಮಳೆಯ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿ ಭಾಗದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು, ದಕ್ಷಿಣ ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಯ ಕೆಲ ಭಾಗಗಳಲ್ಲಿ ಸಾಧಾರಣದಿಂದ ಮಧ್ಯಮ ಮಳೆಯ ನಿರೀಕ್ಷೆಯಿದೆ.

ಕಡಿಮೆ ಒತ್ತಡದ ಪ್ರದೇಶದ ಪರಿಣಾಮ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಕೋಲ್ಕತ್ತಾ ಸೇರಿದಂತೆ ದಕ್ಷಿಣ ಬಂಗಾಳದ ಹಲವಾರು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಮಧ್ಯಂತರ ಮಳೆಯ ನಿರೀಕ್ಷೆಯಿದೆ.

ವರದಿ : ಲಾವಣ್ಯ ಅನಿಗೋಳ

About The Author