ಯುಗಾದಿ ಹಬ್ಬದ ಮುನ್ನವೇ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ‘ನಂದಿನಿ’ ಉತ್ಪನ್ನಗಳಿಗೆ ಸಂಕಷ್ಟ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ, ಅಂದರೆ KMF ಇದೀಗ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮವಾಗಿ ದೇಶಾದ್ಯಂತ ಕಮರ್ಷಿಯಲ್ LPG ಸಿಲಿಂಡರ್ ಕೊರತೆ ಉಂಟಾಗಿದ್ದು, ಅದರ ನೇರ ಪರಿಣಾಮ KMF ಉತ್ಪಾದನಾ ಘಟಕಗಳ ಮೇಲೆ ಬೀಳುತ್ತಿದೆ. ಕಳೆದ ಕೆಲವು ದಿನಗಳಿಂದ ಗ್ಯಾಸ್ ಪೂರೈಕೆ ವ್ಯತ್ಯಯಗೊಂಡಿರುವುದರಿಂದ ನಂದಿನಿ ಉತ್ಪನ್ನಗಳ ತಯಾರಿಕೆ ಒತ್ತಡಕ್ಕೆ ಸಿಲುಕಿದೆ.
ಸಾಮಾನ್ಯವಾಗಿ KMF ಪ್ರತಿಮಾಸ ಸುಮಾರು 450 ಕಮರ್ಷಿಯಲ್ LPG ಸಿಲಿಂಡರ್‌ಗಳನ್ನು ಬಳಸುತ್ತದೆ. ಆದರೆ ಇತ್ತೀಚಿನ ಪರಿಸ್ಥಿತಿಯಲ್ಲಿ ಅಗತ್ಯ ಪ್ರಮಾಣದಲ್ಲಿ ಗ್ಯಾಸ್ ಲಭ್ಯವಾಗುತ್ತಿಲ್ಲ. ಸದ್ಯ ಇರುವ ಗ್ಯಾಸ್ ಸಂಗ್ರಹವು ಇನ್ನೆರಡು ದಿನಗಳಿಗೆ ಮಾತ್ರ ಸಾಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 20ರೊಳಗೆ ಪೂರೈಕೆ ಪುನರಾರಂಭವಾಗದಿದ್ದರೆ, ನಂದಿನಿ ಬ್ರ್ಯಾಂಡ್‌ನ ಉತ್ಪನ್ನಗಳ ತಯಾರಿಕೆಗೆ ತೀವ್ರ ಹೊಡೆತ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ KMF ಸರ್ಕಾರದ ಗಮನಕ್ಕೆ ವಿಷಯವನ್ನು ತಂದಿದೆ. ಪರಿಸ್ಥಿತಿ ಮುಂದುವರಿದರೆ, ನಂದಿನಿ ಉತ್ಪನ್ನಗಳ ಉತ್ಪಾದನೆಯನ್ನು ಸೀಮಿತಗೊಳಿಸುವ ಅನಿವಾರ್ಯತೆ ಎದುರಾಗಬಹುದು ಎಂಬ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.




