ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ತಿರುವನಂತಪುರದಲ್ಲಿ ಕಾಂಗ್ರೆಸ್ ಪಕ್ಷವು 37 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಮೂಲಕ ಈಗಾಗಲೇ ಘೋಷಿಸಿರುವ ಮೊದಲ ಪಟ್ಟಿಯೊಂದಿಗೆ ಒಟ್ಟು ಅಭ್ಯರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಕಣ್ಣೂರು ಕ್ಷೇತ್ರದಿಂದ ಮಾಜಿ ಮೇಯರ್ T.O. ಮೋಹನನ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ನಿರ್ಧಾರದಿಂದ ಹಾಲಿ ಸಂಸದ ಕೆ. ಸುಧಾಕರನ್ ಅಸಮಾಧಾನಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ, ಸೇನಾಪತಿ ವೇಣು ಅವರನ್ನು ಉಡುಂಬಂಚೋಳ ಕ್ಷೇತ್ರದಿಂದ ಹಾಗೂ ಶಾಂತಕುಮಾರ್ ಅವರನ್ನು ಅಡೂರ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ತ್ರಿಕರಿಪುರ ಕ್ಷೇತ್ರದಿಂದ ಸಂದೀಪ್ ವಾರಿಯರ್ ಸ್ಪರ್ಧಿಸುತ್ತಿದ್ದು, ಕಾಯಂಕುಲಂ ಕ್ಷೇತ್ರದಿಂದ ಎಂ. ಲಿಜು ಮತ್ತು ಅರನ್ನುಲಾ ಕ್ಷೇತ್ರದಿಂದ ಅಬಿನ್ ವರ್ಕಿ ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ. ಈಗಾಗಲೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ 55 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು.
ಕೇರಳ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸನ್ನಿ ಜೋಸೆಫ್ ಅವರನ್ನು ಪೆರಾವೂರ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದ್ದು, ಪರವೂರ್ ಕ್ಷೇತ್ರದಿಂದ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಸ್ಪರ್ಧಿಸುತ್ತಿದ್ದಾರೆ. ಇನ್ನೂ ಪ್ರಮುಖ ಬೆಳವಣಿಗೆಯಾಗಿ, ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ಅವರ ಪುತ್ರ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಅವರನ್ನು ವಟ್ಟಿಯೂರ್ಕಾವು ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆಯಲಿದ್ದು, ಪ್ರಸ್ತುತ ವಿಧಾನಸಭೆಯ ಅವಧಿ ಮೇ 23ರಂದು ಅಂತ್ಯಗೊಳ್ಳಲಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಕೇರಳದಲ್ಲಿ ಚುನಾವಣಾ ರಂಗ ಮತ್ತಷ್ಟು ಕಾವೇರಿದ್ದು, ಪ್ರಮುಖ ನಾಯಕರ ಸ್ಪರ್ಧೆ ಕುತೂಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳುವ ನಿರೀಕ್ಷೆ ಇದೆ.
ವರದಿ : ಲಾವಣ್ಯ ಅನಿಗೋಳ




