ಬೆಂಗಳೂರು ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿಯ ಪರ ಸ್ತ್ರೀ ವ್ಯಾಮೋಹಕ್ಕೆ ಬೇಸತ್ತು ಪತ್ನಿಯೊಬ್ಬರು ನ್ಯಾಯಕ್ಕಾಗಿ ಡಿವೈಎಸ್ಪಿ ಕಚೇರಿ ಮೆಟ್ಟಿಲೇರಿರುವ ಘಟನೆ ಬೆಳಕಿಗೆ ಬಂದಿದೆ. ಬೈಲಪ್ಪನ ಪಾಳ್ಯದ ನಿವಾಸಿಗಳಾದ ಪುನೀತ್ ಕುಮಾರ್ ಮತ್ತು ಪವಿತ್ರಾ ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಿದ ಪವಿತ್ರಾ ಅವರ ಪೋಷಕರು ಸುಮಾರು 200 ಗ್ರಾಂ ಚಿನ್ನಾಭರಣವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮದುವೆಯಾದ ಮೊದಲ ಒಂದು ವರ್ಷ ದಂಪತಿಗಳು ಅನ್ಯೋನ್ಯವಾಗಿ ಜೀವನ ನಡೆಸಿದ್ದರು. ಆದರೆ ಬಳಿಕ ಸಣ್ಣಪುಟ್ಟ ವಿಚಾರಗಳಿಗೂ ಜಗಳಗಳು ಆರಂಭವಾಗಿದ್ದು, ಪತಿ ಪುನೀತ್ ಕುಮಾರ್ ಪತ್ನಿ ಪವಿತ್ರಾ ಮೇಲೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೂ ಮಧ್ಯೆ, ಪುನೀತ್ ಕುಮಾರ್ ಬೇರೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಇದೇ ವಿಚಾರಕ್ಕೆ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಪವಿತ್ರಾ ದೂರಿದ್ದಾರೆ.
ಪತಿಯ ಕಿರುಕುಳ ತಾಳಲಾರದೆ ಪವಿತ್ರಾ ಕಳೆದ ನಾಲ್ಕು ವರ್ಷಗಳಿಂದ ದಾಬಸ್‌ಪೇಟೆಯಲ್ಲಿರುವ ತಮ್ಮ ಅಜ್ಜಿ-ತಾತನ ಮನೆಯಲ್ಲಿ ಆಶ್ರಯ ಪಡೆದು ಜೀವನ ನಡೆಸುತ್ತಿದ್ದಾರೆ. ಈ ನಡುವೆ ಪತ್ನಿಗೆ ವಿಚ್ಛೇದನ ನೀಡುವಂತೆ ಪುನೀತ್ ಒತ್ತಾಯಿಸುತ್ತಿದ್ದಾನೆ ಎನ್ನಲಾಗಿದೆ. ಇನ್ನೂ ಮದುವೆಯ ವೇಳೆ ನೀಡಿದ್ದ 200 ಗ್ರಾಂ ಚಿನ್ನಾಭರಣ ಪತಿಯ ಮನೆಯಲ್ಲೇ ಉಳಿದಿದ್ದು, ಸಮಾರಂಭಗಳಿಗೆ ತೆರಳಲು ಒಡವೆಗಳನ್ನು ಕೇಳಿದಾಗ ಪುನೀತ್ ಮತ್ತು ಆತನ ಕುಟುಂಬಸ್ಥರು ನೀಡದೆ ಗಲಾಟೆ ಮಾಡುತ್ತಿದ್ದಾರೆ ಎಂದು ಪವಿತ್ರಾ ಆರೋಪಿಸಿದ್ದಾರೆ.
ಈ ಸಂಬಂಧ ದಾಬಸ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಸಮರ್ಪಕ ಸ್ಪಂದನೆ ಸಿಗಲಿಲ್ಲ ಎಂದು ಆರೋಪಿಸಿರುವ ಪವಿತ್ರಾ, ತಾನು ಅನಾಥೆಯಾಗಿದ್ದು ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿಕೊಂಡು ನೆಲಮಂಗಲ ಡಿವೈಎಸ್ಪಿ ಕಚೇರಿಗೆ ಭೇಟಿ ನೀಡಿದ್ದಾರೆ. ಸದ್ಯ ಪ್ರಕರಣದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ವರದಿ : ಲಾವಣ್ಯ ಅನಿಗೋಳ




