ರಾಜಧಾನಿ ಬೆಂಗಳೂರಿನಲ್ಲಿ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಮಗನೇ ಬಹುಮಹಡಿ ಕಟ್ಟಡದ ಮೇಲಿಂದ ತಳ್ಳಿ ಕೊಲೆ ಮಾಡಿರುವ ಅಮಾನವೀಯ ಘಟನೆ ಆರ್‌ಆರ್ ನಗರದ ಬೆಮಲ್ ಲೇಔಟ್‌ನಲ್ಲಿ ನಡೆದಿದೆ.
ವೆಂಕಟೇಶ್ ಎಂಬಾತ ತನ್ನ ತಾಯಿ ಸಾವಿತ್ರಮ್ಮ (72) ಅವರನ್ನು ಮೂರನೇ ಮಹಡಿಯ ಮೇಲಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪಾರ್ಶ್ವವಾಯು ಪೀಡಿತರಾಗಿದ್ದ ಸಾವಿತ್ರಮ್ಮ ಕಳೆದ ಐದಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಬಹುತೇಕ ಅರೆ ಪ್ರಜ್ಞಾವಸ್ಥೆಯಲ್ಲೇ ಇದ್ದರು ಎಂದು ತಿಳಿದುಬಂದಿದೆ.
ತಾಯಿಯ ಅನಾರೋಗ್ಯ ಮತ್ತು ಆರೈಕೆಯಿಂದ ಬೇಸತ್ತಿದ್ದ ಪುತ್ರ ವೆಂಕಟೇಶ್ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆರ್‌ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ಸಂಬಂಧ ವೆಂಕಟೇಶ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಾವಿತ್ರಮ್ಮ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಮುಪ್ಪಿನ ವಯಸ್ಸು ಜೀವನದ ಅತ್ಯಂತ ಸೂಕ್ಷ್ಮ ಹಂತವಾಗಿದೆ. ಈ ಸಮಯದಲ್ಲಿ ಹಿರಿಯರಿಗೆ ಮಕ್ಕಳ ಪ್ರೀತಿ, ಆರೈಕೆ ಮತ್ತು ಭದ್ರತೆ ಅತ್ಯಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ವೃದ್ಧರ ಮೇಲಿನ ನಿರ್ಲಕ್ಷ್ಯ, ಕಿರುಕುಳ ಹಾಗೂ ಹಿಂಸಾಚಾರದ ಘಟನೆಗಳು ಹೆಚ್ಚಾಗುತ್ತಿದ್ದು, ಸಮಾಜದಲ್ಲಿ ಆತಂಕ ಮೂಡಿಸುತ್ತಿವೆ.
ಹಿರಿಯರು ಕುಟುಂಬದ ಹೊಣೆಗಾರಿಕೆಯಾಗಿದ್ದು, ಅವರ ಆರೈಕೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದರೆ ತಾಯಿಯನ್ನು ಸಾಕಿ ಬೆಳೆಸಿದ ಮಗನೇ ಇಂತಹ ಕೃತ್ಯ ಎಸಗಿರುವುದು ಮಾನವೀಯ ಮೌಲ್ಯಗಳ ಕುಸಿತಕ್ಕೆ ಸಾಕ್ಷಿಯಾಗಿದೆ.
ವರದಿ : ಲಾವಣ್ಯ ಅನಿಗೋಳ




