ʼಕಾಂತಾರʼ & ʼಕಾಂತಾರ ಚಾಪ್ಟರ್ 1ʼ ಯಶಸ್ಸಿನ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದ ರಿಷಬ್ ಶೆಟ್ಟಿ. ಈಗ ಟಾಲಿವುಡ್ನತ್ತ ಹೆಜ್ಜೆ ಹಾಕುತ್ತಿದ್ದಾರೆ. ರಿಷಬ್ ಶೆಟ್ಟಿ ಅವರ ಬಹು ನಿರೀಕ್ಷಿತ ಸಿನಿಮಾ ಯಾವುದೇ ದೊಡ್ಡ ಮಟ್ಟದ ಪ್ರಚಾರ ಕಾರ್ಯಕ್ರಮಗಳಿಲ್ಲದೇ ಬಿಡುಗಡೆಗೆ ಸಜ್ಜಾಗಿದೆ.
2022 ರಲ್ಲಿ ತೆರೆ ಕಂಡ ರಿಷಬ್ ಶೆಟ್ಟಿ ಅವರ ಹರಿ ʼಕಥೆ ಅಲ್ಲ ಗಿರಿ ಕಥೆʼ ಸಿನಿಮಾ ಸದ್ದಿಲ್ಲದೇ ಸುದ್ದಿಯಾಗುತ್ತಿದ್ದು, ಈಗ ಮತ್ತೆ ಈ ಸಿನಿಮಾ ತೆಲಗು ಭಾಷೆಯಲ್ಲಿ ಡಬ್ ಆಗಿ ಸೈಲೆಂಟ್ ಆಗಿ ಸೆಟ್ಟೇರಲಿದೆ. ‘ಎ ಫಿಲ್ಮ್ ಬೈ ಗಿರಿ’ ಎಂಬ ಹೆಸರಿನಲ್ಲಿ ಮೇ 08 ರಂದು ಈ ಸಿನಿಮಾ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ರಿಲೀಸ್ ಗೆ ಸಿದ್ದವಾಗಿದೆ.
ಈ ಸಿನಿಮಾ ಕನ್ನಡದಲ್ಲಿ ತೆರೆಕಂಡಾಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರಲಿಲ್ಲ. ನಂತರ ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಣೆಗೆ ಲಭ್ಯವಿತ್ತು. ʼಕಾಂತಾರ ಚಾಪ್ಟರ್ 1ʼ ಹಿಟ್ ನಂತರ ಸಖತ್ ಕ್ರೇಜ್ ಸೆಟ್ ಮಾಡಿದ್ದ ರಿಷಬ್ ಶೆಟ್ಟಿ ಅವರ ಹಳೆಯ ಸಿನಿಮಾವನ್ನು ಮತ್ತೆ ತೆಲುಗಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.
ಈ ಸಿನಿಮಾ ವಿಶೇಷತೆ ನೋಡೊದಾದ್ರೆ- ಯಾವುದೇ ದೊಡ್ಡ ಪ್ರಚಾರ ಮತ್ತು ಭರ್ಜರಿ ಪ್ರಮೋಷನ್ ಕಾರ್ಯಕ್ರಮಗಳಿಲ್ಲದೇ, ಸೈಲೆಂಟ್ ಆಗಿ ಸಖತ್ ಸುದ್ದಿ ಮಾಡುತ್ತಾ ತೆರೆ ಮೇಲೆ ಬರಲು ಸಿದ್ದವಾಗಿದೆ. ಬ್ಯಾಕ್ ಟು ಬ್ಯಾಕ್ ಸಕ್ಸಸ್ ನಂತರ ಬಿಡುಗಡೆಗೆ ಸಿದ್ದವಾಗಿರುವ ಈ ಸಿನಿಮಾ ಪ್ರಚಾರವಿಲ್ಲದೇ ತೆರೆಗೆ ಬರುತ್ತಿರುವ ಹಿನ್ನಲೆಯಲ್ಲಿ ಸಿನಿಮಾ ಕುರಿತು ಚಿತ್ರರಂಗದಲ್ಲಿ ಮತ್ತು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ʼಇಷ್ಟು ಕಡಿಮೆ ಪ್ರಚಾರದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿರುವುದೇಕೆ?ʼ ಎಂಬ ಪ್ರಶ್ನೆ ಕೇಳಿಬರುತ್ತಿದೆ.
ʼಹರಿ ಕಥೆ ಅಲ್ಲ ಗಿರಿ ಕಥೆʼ ಚಿತ್ರ ಕಥೆ ಗಿರಿ ಕೃಷ್ಣ ಬರೆದಿದ್ದಾರೆ. ಕರಣ್ ಆನಂದ್ ಮತ್ತು ಅನಿರುದ್ಧ ಮಹೇಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಿಷಬ್ ಶೆಟ್ಟಿ ಸೇರಿದಂತೆ ತಪಸ್ವಿನಿ ಪೂಣಚ್ಚ, ರಚನಾ ಇಂದರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಮತ್ತು ರಿಷಬ್ ಶೆಟ್ಟಿ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇನ್ನು ತೆಲುಗು ಅವತರಣಿಕೆಯನ್ನು ಎಂಜಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಚ್ಚಿಬಾಬು ಅವರು ಬಿಡುಗಡೆ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಅವರ ಇತ್ತೀಚಿನ ಜನಪ್ರಿಯತೆಯೇ ಈ ಮರುಬಿಡುಗಡೆಗೆ ಪ್ರಮುಖ ಕಾರಣ ಎಂದು ಚಿತ್ರೋದ್ಯಮದಲ್ಲಿ ಹೇಳಲಾಗುತ್ತಿದೆ.
ಒಟ್ಟಿನಲ್ಲಿ, ಹಳೆಯ ಸಿನಿಮಾ ಈಗ ಹೊಸ ಮಾರುಕಟ್ಟೆಯಲ್ಲಿ ಎಷ್ಟು ಯಶಸ್ಸು ಕಾಣುತ್ತದೆ? ಎಂಬುದೇ ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ.




