ಕೊಪ್ಪಳ ಜಿಲ್ಲೆಯಲ್ಲಿ ಧಾರ್ಮಿಕ ಸ್ಥಳಗಳು, ಶಾಲೆ-ಕಾಲೇಜುಗಳು ಹಾಗೂ ಬಸ್ ನಿಲ್ದಾಣಗಳ ಸಮೀಪದಲ್ಲೇ ಕಾರ್ಯನಿರ್ವಹಿಸುತ್ತಿರುವ ಬಾರ್ ಮತ್ತು ವೈನ್ ಶಾಪ್‌ಗಳನ್ನು ತಕ್ಷಣ ಬಂದ್ ಮಾಡಬೇಕು ಎಂದು ನಮ್ಮ ಕರ್ನಾಟಕ ಸೇನೆ ಆಗ್ರಹಿಸಿದೆ.
ಈ ಸಂಬಂಧ ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ದೇಶ್ವರ ಅವರ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ಸಂಘಟನೆ, ಜಿಲ್ಲೆಯಲ್ಲಿ ಮದ್ಯದ ಅಂಗಡಿಗಳು ನಿಯಮ ಉಲ್ಲಂಘನೆ ಮಾಡಿ ಎಲ್ಲೆಂದರಲ್ಲಿ ತಲೆಎತ್ತುತ್ತಿರುವುದಾಗಿ ಆರೋಪಿಸಿದೆ. ದೇವಸ್ಥಾನಗಳು, ಶಾಲೆಗಳು, ಕಾಲೇಜುಗಳು, ಬಸ್ ನಿಲ್ದಾಣಗಳು ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ 200 ಮೀಟರ್ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳು ಇರಬಾರದು ಎಂಬ ನಿಯಮ ಇದ್ದರೂ, ಅನೇಕ ಕಡೆಗಳಲ್ಲಿ ಅದನ್ನು ಲೆಕ್ಕಿಸದೇ ಬಾರ್ ಮತ್ತು ವೈನ್ ಶಾಪ್‌ಗಳು ನಡೆಯುತ್ತಿವೆ ಎಂದು ಸಂಘಟನೆ ದೂರಿದೆ. ಇದೇ ವೇಳೆ ಹೋಟೆಲ್, ಡಾಬಾ, ರಸ್ತೆ ಬದಿಯ ಅಂಗಡಿಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಇದರಿಂದ ಯುವಕರು ಮದ್ಯದ ವ್ಯಸನಕ್ಕೆ ಒಳಗಾಗಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಬಾರ್ ಮತ್ತು ವೈನ್ ಶಾಪ್‌ಗಳನ್ನು ಬಂದ್ ಮಾಡಿ, ಸೂಕ್ತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳಾದ ಬಂದೇ ನವಾಜ್ ಮನೆಯಾರ್, ಯಮನೂರ್ಸಾಬ್, ಭಕ್ಷಿ, ಕಿರಣ್ ಕುಮಾರ್, ರಮೇಶ್ ನರೇಗಲ್, ಬಸವರಾಜ್, ಬೆಳ್ಳಪ್ಪ ಬಿ ಹಾಗೂ ಭರತ್ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




