ಚಿನ್ನದ ದರ ದಿನದಿಂದ ದಿನಕ್ಕೆ ಏರುತ್ತಿರುವ ನಡುವೆ, ಒಂದು ವರ್ಷದವರೆಗೆ ಅನಗತ್ಯವಾಗಿ ಚಿನ್ನ ಖರೀದಿ ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಅಕ್ಕಸಾಲಿಗರು ಹಾಗೂ ಚಿನ್ನಾಭರಣ ವ್ಯಾಪಾರಿಗಳಲ್ಲಿ ಆತಂಕ ವ್ಯಕ್ತವಾಗಿದೆ. ಹುಬ್ಬಳ್ಳಿಯ ಸರಾಫ್ ಸಂಘದ ಅಧ್ಯಕ್ಷ ಪರಶುರಾಮ ಚಿಲ್ಲಾಳ ಅವರು ಪ್ರತಿಕ್ರಿಯಿಸಿ, ದೇಶದಲ್ಲಿ ಚಿನ್ನ ಉತ್ಪಾದನೆ ಇಲ್ಲದ ಕಾರಣ ಹೆಚ್ಚಿನ ಆಮದು ನಡೆಯುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವೂ ದರ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದರು. ಚಿನ್ನದ ಬೆಲೆ ಏರಿಕೆಯ ಬಳಿಕವೇ ಗ್ರಾಹಕರ ಸಂಖ್ಯೆ ಈಗಾಗಲೇ ಕಡಿಮೆಯಾಗಿದೆ ಎಂದೂ ಅವರು ತಿಳಿಸಿದರು. ಆದರೂ ವ್ಯಾಪಾರಕ್ಕೆ ದೊಡ್ಡ ಮಟ್ಟದ ಹಾನಿ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ಕರೆ ಬಂದರೂ ಜನರು ಸಂಪೂರ್ಣವಾಗಿ ಚಿನ್ನ ಖರೀದಿಯನ್ನು ನಿಲ್ಲಿಸುವ ಸಾಧ್ಯತೆ ಕಡಿಮೆ. ಕನಿಷ್ಠ ಶೇ.25 ಜನರು ಖರೀದಿ ಮುಂದುವರಿಸಿದರೆ ಅಂಗಡಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಹುಬ್ಬಳ್ಳಿಯಲ್ಲಿ ಸುಮಾರು 450ಕ್ಕೂ ಹೆಚ್ಚು ಚಿನ್ನದ ಅಂಗಡಿಗಳಿವೆ. 190ಕ್ಕೂ ಹೆಚ್ಚು ಸದಸ್ಯರು ಸರಾಫ್ ಗಟ್ಟಿಯಲ್ಲಿ ಸೇರಿದ್ದಾರೆ ಎಂದು ವಿವರಿಸಿದರು. ಇದೇ ವೇಳೆ ಮತ್ತೊಬ್ಬ ವ್ಯಾಪಾರಿ ದೀಪಕ್ ಲಾಳಗೆ ಮಾತನಾಡಿ, ಮದುವೆ ಹಾಗೂ ಸಮಾರಂಭಗಳಲ್ಲಿ ಚಿನ್ನ ಖರೀದಿ ಮುಂದುವರಿಯುತ್ತದೆ. ಆದರೆ ಪ್ರಮಾಣ ಕಡಿಮೆಯಾಗಬಹುದು ಎಂದರು. ದೇಶದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಜನರು ಹೊಂದಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಆದರೆ ಅಕ್ಕಸಾಲಿಗ ನಾರಾಯಣ್ ರಾಮಚಂದ್ರ ಬಡಿಗೇರ್ ಅವರು ಆತಂಕ ವ್ಯಕ್ತಪಡಿಸಿದ್ದು, ಚಿನ್ನ ಖರೀದಿ ಕಡಿಮೆಯಾದರೆ ಕುಸುರಿ ಕೆಲಸದ ಮೇಲೆ ನಂಬಿಕೆ ಇಟ್ಟಿರುವ ಅಕ್ಕಸಾಲಿಗರ ಬದುಕಿಗೆ ಹೊಡೆತ ಬೀಳಬಹುದು ಎಂದು ಹೇಳಿದರು. ಮದುವೆ, ಸಮಾರಂಭಗಳಲ್ಲಿ ಚಿನ್ನದ ಬೇಡಿಕೆ ಕಡಿಮೆಯಾದರೆ ವೃತ್ತಿ ನಷ್ಟವಾಗುವ ಭೀತಿ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.




