ರಾಜಧಾನಿ ಬೆಂಗಳೂರಿನಲ್ಲಿ ರಾಜಕೀಯ ಸಮೀಕರಣಗಳು ದಿನದಿಂದ ದಿನಕ್ಕೆ ಅತ್ಯಂತ ರೋಚಕವಾಗುತ್ತಿವೆ. ಮುಂಬರಲಿರುವ GBA ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರ್ಜರಿ ಮಾಸ್ಟರ್‌ಪ್ಲಾನ್ ರೂಪಿಸಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಿಂದ ಗಟ್ಟಿಗೊಳಿಸಲು ಮತ್ತು ಜಿಬಿಎ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಮ್ಮ ಸಂಪುಟದಲ್ಲಿ ರಾಜಧಾನಿಯಿಂದ ಬರೋಬ್ಬರಿ ಆರು ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಪ್ರಮುಖ ರಣತಂತ್ರ ಹೆಣೆದಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿದ್ದು, ಈ ವರ್ಷದ ಡಿಸೆಂಬರ್‌ನಲ್ಲಿ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಈ ಮಹತ್ವದ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಸಚಿವ ಸಂಪುಟದಲ್ಲಿ ಬೆಂಗಳೂರಿಗೆ ಸಿಂಹಪಾಲು ನೀಡಿದ್ದಾರೆ. ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಕೆ.ಜೆ. ಜಾರ್ಜ್, ಬೈರತಿ ಸುರೇಶ್, ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಹಾಗೂ ರಿಜ್ವಾನ್ ಅರ್ಷದ್ ಸಚಿವರಾಗಿ ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ.
ಈ ಪೈಕಿ ರಾಮಲಿಂಗಾರೆಡ್ಡಿ ಮತ್ತು ಜಮೀರ್ ಅಹ್ಮದ್ ಖಾನ್ ಅವರು ದಕ್ಷಿಣ ಬೆಂಗಳೂರಿನ ಹೊಣೆ ಹೊತ್ತಿದ್ದರೆ, ಕೃಷ್ಣ ಬೈರೇಗೌಡ ಹಾಗೂ ಬೈರತಿ ಸುರೇಶ್ ಉತ್ತರ ಬೆಂಗಳೂರಿನ ರಾಜಕೀಯ ಕಮಾಂಡ್ ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಇನ್ನು ಕೆ.ಜೆ. ಜಾರ್ಜ್ ಮತ್ತು ರಿಜ್ವಾನ್ ಅರ್ಷದ್ ಪೂರ್ವ ಬೆಂಗಳೂರು ಭಾಗದ ಮುಖಂಡರಾಗಿ ಸಾರಥ್ಯ ವಹಿಸಿದ್ದಾರೆ. ಇದರ ಜೊತೆಗೆ ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಿರುವುದರಿಂದ ಆ ಭಾಗದ ರಾಜಕೀಯ ಪ್ರಾಮುಖ್ಯತೆಯೂ ಹೆಚ್ಚಿದೆ. ಸ್ವತಃ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಎಚ್.ಸಿ. ಬಾಲಕೃಷ್ಣ ಆ ಭಾಗದ ಮುಂಚೂಣಿ ನಾಯಕರಾಗಿದ್ದಾರೆ.
ಆದರೆ ಈ ಸಚಿವ ಸ್ಥಾನದ ರೇಸ್‌ನಲ್ಲಿ ಕೆಲವರಿಗೆ ನಿರಾಸೆಯೂ ಆಗಿದೆ. ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದರೂ ಅವಕಾಶ ಸಿಗದಿರುವುದು ಅವರ ಬೆಂಬಲಿಗರಲ್ಲಿ ಅಸಮಾಧಾನ ಮೂಡಿಸಿದೆ. ಹಾಗೆಯೇ ಪಶ್ಚಿಮ-ಮಧ್ಯ ಬೆಂಗಳೂರು ಪ್ರತಿನಿಧಿಸುತ್ತಿದ್ದ ದಿನೇಶ್ ಗುಂಡೂರಾವ್ ಅವರಿಗೆ ಈ ಬಾರಿ ಸ್ಥಾನ ಮಿಸ್ ಆಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಡಿಕೆಶಿ ಅವರ ಈ ಮಾಸ್ಟರ್‌ಪ್ಲಾನ್ ಕೇವಲ ಮುಂಬರುವ ಜಿಬಿಎ ಚುನಾವಣೆಗೆ ಮಾತ್ರವಲ್ಲದೆ, 2029ರ ಲೋಕಸಭೆ ಚುನಾವಣೆಯ ಸಮೀಕರಣಗಳ ಮೇಲೂ ದೊಡ್ಡ ಪ್ರಭಾವ ಬೀರಲಿದೆ. ಜಿಬಿಎ ಕದನಕ್ಕಾಗಿ ಹೂಡಿರುವ ಈ ತಂತ್ರ ಯಾವ ಮಟ್ಟಿಗೆ ವರ್ಕೌಟ್ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.




