ಗೃಹಜ್ಯೋತಿ ಫ್ರೀ ಕರೆಂಟ್ ಕಟ್ ಆಗುತ್ತಾ? ಮನೆ-ಮನೆ ಸಮೀಕ್ಷೆ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಶಾಕಿಂಗ್ ವಿಷಯಗಳು!

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರಿಗೆ ಇಂಧನ ಇಲಾಖೆಯಿಂದ ಒಂದು ಪ್ರಮುಖ ಎಚ್ಚರಿಕೆ ಬಂದಿದೆ. ರಾಜ್ಯಾದ್ಯಂತ ನಡೆಯುತ್ತಿರುವ ಮನೆ-ಮನೆ ಸಮೀಕ್ಷೆಯಲ್ಲಿ ಅಗತ್ಯ ಮಾಹಿತಿ ನೀಡದಿದ್ದರೆ ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಯ ಅಸಲಿ ಫಲಾನುಭವಿಗಳನ್ನು ಗುರುತಿಸಲು ಇಂಧನ ಇಲಾಖೆಯು ಕಟ್ಟುನಿಟ್ಟಿನ ಸಮೀಕ್ಷೆ ನಡೆಸುತ್ತಿದೆ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 1 ಕೋಟಿ 65 ಲಕ್ಷಕ್ಕೂ ಹೆಚ್ಚು ಗೃಹ ವಿದ್ಯುತ್ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಆದರೆ ಇದುವರೆಗೆ ಕೇವಲ 91 ಲಕ್ಷ ಜನರ ಸಮೀಕ್ಷೆ ಮಾತ್ರ ಮುಗಿದಿದ್ದು, ಇನ್ನೂ ಬರೋಬ್ಬರಿ 73 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಮಾಹಿತಿ ಸಂಗ್ರಹವಾಗಬೇಕಿದೆ.

ಮನೆಗೆ ಬರುವ ಮೀಟರ್ ರೀಡರ್‌ಗಳಿಗೆ ಸರಿಯಾದ ಮಾಹಿತಿ ನೀಡಲು ನಿರಾಕರಿಸಿದರೆ ಅಥವಾ ಸಿಬ್ಬಂದಿ ಭೇಟಿ ನೀಡಿದಾಗ ಮನೆಯಲ್ಲಿ ಇಲ್ಲದಿದ್ದರೆ, ಅಂತಹವರನ್ನು ಯೋಜನೆಯಿಂದ ಕೈಬಿಡುವ ಗಂಭೀರ ಎಚ್ಚರಿಕೆ ನೀಡಲಾಗಿದೆ. ಅದರಲ್ಲೂ ಬೆಂಗಳೂರಿನ ವೈಟ್‌ಫೀಲ್ಡ್, ಮಹದೇವಪುರ ಮತ್ತು ಸರ್ಜಾಪುರದ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಕೆಲವರು ತಮ್ಮ ವೈಯಕ್ತಿಕ ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದು ಸಮೀಕ್ಷೆಗೆ ಹಿನ್ನಡೆಯಾಗಿದೆ. ಈ ಕುರಿತು ಮಾತನಾಡಿರುವ ಬೆಸ್ಕಾಂ ಎಂಡಿ ಶಿವಶಂಕರ ಎನ್, ಸದ್ಯಕ್ಕೆ ಯಾರನ್ನೂ ಪಟ್ಟಿಯಿಂದ ಕೈಬಿಟ್ಟಿಲ್ಲ ಎಂದಿದ್ದು, ಮಾಹಿತಿ ನೀಡಲು ನಿರಾಕರಿಸಿದರೆ ಆ್ಯಪ್‌ನಲ್ಲಿ ಪ್ರತ್ಯೇಕ ಆಯ್ಕೆ ಇರುತ್ತದೆ ಮತ್ತು ಅಂತಿಮ ತೀರ್ಮಾನವನ್ನು ಸರ್ಕಾರವೇ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಮೀಕ್ಷೆ ವೇಳೆ ಯಾವ ದಾಖಲೆಗಳು ಬೇಕು? ಮೀಟರ್ ರೀಡರ್‌ಗಳು ಮನೆಗೆ ಬಂದಾಗ ಗ್ರಾಹಕರು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು:

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ವೋಟರ್ ಐಡಿ (ಮತದಾರರ ಗುರುತಿನ ಚೀಟಿ)
  • ರೇಷನ್ ಕಾರ್ಡ್ (ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ವಿವರಗಳು)
  • ಬಾಡಿಗೆ ಮನೆಯವರಾಗಿದ್ದರೆ ಲೀಸ್ ಅಥವಾ ಅಗ್ರೀಮೆಂಟ್ ಪತ್ರ

ಒಂದ್ವೇಳೆ ಸಿಬ್ಬಂದಿ ಬಂದಾಗ ನೀವು ಮನೆಯಲ್ಲಿ ಇಲ್ಲದಿದ್ದರೆ ಚಿಂತಿಸಬೇಕಿಲ್ಲ; ಅವರು ಮತ್ತೊಮ್ಮೆ ಭೇಟಿ ನೀಡಲಿದ್ದಾರೆ. ಹಾಗೂ ಅಗತ್ಯವಿದ್ದರೆ ಹತ್ತಿರದ ಎಸ್ಕಾಂ ಕಚೇರಿಗಳಲ್ಲಿ ವಿಶೇಷ ಶಿಬಿರಗಳನ್ನು (Special Camps) ಆಯೋಜಿಸಲು ಸಹ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಚಿತ ಕರೆಂಟ್ ಸೌಲಭ್ಯ ಯಾವುದೇ ತೊಂದರೆ ಇಲ್ಲದೆ ಮುಂದುವರೆಯಲು, ಸಾರ್ವಜನಿಕರು ಸಮೀಕ್ಷಾ ಸಿಬ್ಬಂದಿಯೊಂದಿಗೆ ಕಡ್ಡಾಯವಾಗಿ ಸಹಕರಿಸುವಂತೆ ಇಲಾಖೆ ಮನವಿ ಮಾಡಿದೆ.

About The Author