ಟ್ರಾಫಿಕ್ ಕಿರಿಕಿರಿದಿಂದ ಬೆಂಗಳೂರಿಗರಿಗೆ ಮುಕ್ತಿ- ಬಂಪರ್ ಆಫರ್ ಜೊತೆಗೆ ಭಾರೀ ದಂಡದ ಅಸ್ತ್ರ!

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಮತ್ತು ಅಡ್ಡಾದಿಡ್ಡಿ ಪಾರ್ಕಿಂಗ್ ಎಂದರೆ ವಾಹನ ಸವಾರರಿಗೆ ನಿತ್ಯದ ತಲೆನೋುವಾಗಿದೆ. ಈ ಗಂಟಲಾಸಿನ ಸಮಸ್ಯೆಗೆ ಕಟ್ಟುನಿಟ್ಟಿನ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾರ್ಕಿಂಗ್ ನಿಯಮಗಳು-2026’ರ ಕರಡು ಅಧಿಸೂಚನೆ ಹೊರಬಿದ್ದಿದ್ದು, ಖಾಲಿ ಜಾಗ ಹೊಂದಿರುವವರಿಗೆ ಬಂಪರ್ ಆಫರ್ ನೀಡಿದರೆ, ನಿಯಮ ಉಲ್ಲಂಘಿಸುವವರಿಗೆ ಭಾರೀ ದಂಡದ ಬಿಸಿ ಮುಟ್ಟಿಸಲು ಸಜ್ಜಾಗಿದೆ.

ಮೊದಲನೆಯದಾಗಿ, ನಗರದಲ್ಲಿ ಸ್ವಂತ ಖಾಲಿ ನಿವೇಶನ ಅಥವಾ ಜಾಗ ಹೊಂದಿರುವ ಭೂಮಾಲೀಕರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ನಿಮ್ಮ ಜಾಗದಲ್ಲಿ 30 ರಿಂದ 200 ವಾಹನಗಳ ನಿಲುಗಡೆ ಸಾಮರ್ಥ್ಯದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ, ನಿಮಗೆ ಬರೋಬ್ಬರಿ ಶೇ. 100ರಷ್ಟು ಆಸ್ತಿ ತೆರಿಗೆ ಹಾಗೂ ಸೇವಾ ಶುಲ್ಕ ವಿನಾಯಿತಿ ಸಿಗಲಿದೆ. ಇನ್ನು ಕನಿಷ್ಠ 15 ಪಿಸಿಯು ಸಾಮರ್ಥ್ಯವಿದ್ದರೂ ಶೇ. 50ರಷ್ಟು ವಿನಾಯಿತಿ ಪಡೆಯಬಹುದು. ಆದಾಗ್ಯೂ, ಈ ಸೌಲಭ್ಯ ಪಡೆಯಲು ವರ್ಷದಲ್ಲಿ 250 ದಿನ ಮತ್ತು ದಿನಕ್ಕೆ ಕನಿಷ್ಠ 12 ಗಂಟೆಗಳ ಕಾಲ ಸಾರ್ವಜನಿಕರಿಗೆ ಸೇವೆ ನೀಡಬೇಕು ಎಂಬ ಕಡ್ಡಾಯ ನಿಬಂಧನೆ ವಿಧಿಸಲಾಗಿದೆ.

ಮತ್ತೊಂದೆಡೆ, ವಾಣಿಜ್ಯ ಮಳಿಗೆ ಹಾಗೂ ಕಟ್ಟಡಗಳ ಮಾಲೀಕರು ಈ ಹೊಸ ನಿಯಮಗಳ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕಿದೆ. ಕಟ್ಟಡದ ನಕ್ಷೆಯ (ಪ್ಲಾನ್) ಪ್ರಕಾರ ಕಡ್ಡಾಯವಾಗಿ ಪಾರ್ಕಿಂಗ್ ಜಾಗ ಬಿಡಲೇಬೇಕು ಮತ್ತು ಅದನ್ನು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ. ಒಂದು ವೇಳೆ ಪಾರ್ಕಿಂಗ್ ಜಾಗವನ್ನು ದುರ್ಬಳಕೆ ಮಾಡಿಕೊಂಡರೆ ವಾರಕ್ಕೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಮೂರು ತಿಂಗಳೊಳಗೆ ಈ ಲೋಪವನ್ನು ಸರಿಪಡಿಸದಿದ್ದರೆ ಅಂಥಹ ಕಟ್ಟಡಗಳ ‘ಒಸಿ’ (ಆಕ್ಯುಪೆನ್ಸಿ ಸರ್ಟಿಫಿಕೇಟ್) ನೇರವಾಗಿ ರದ್ದುಗೊಳ್ಳಲಿದೆ.

ಇದಲ್ಲದೆ, ಪಾರ್ಕಿಂಗ್ ಜಾಗ ಸಾಲುತ್ತಿಲ್ಲ ಎಂದು ಸಬೂಬು ಹೇಳುವ ಹಂಗಿಲ್ಲದಂತೆ ಮಾಡಲು ಸಮೀಪದಲ್ಲೇ ಜಾಗ ಗುತ್ತಿಗೆ ಪಡೆದಿರುವುದನ್ನು ಕಡ್ಡಾಯವಾಗಿ ಸಾಬೀತುಪಡಿಸಬೇಕು. ಇಲ್ಲದಿದ್ದರೆ ವಾರಕ್ಕೆ ಬರೋಬ್ಬರಿ 5,000 ರೂಪಾಯಿ ದಂಡ ವಿಧಿಸುವುದರ ಜೊತೆಗೆ ವ್ಯಾಪಾರ ಪರವಾನಗಿಯನ್ನೇ ರದ್ದುಗೊಳಿಸುವ ಎಚ್ಚರಿಕೆ ನೀಡಲಾಗಿದೆ. ಇನ್ನುಮುಂದೆ ಪಾರ್ಕಿಂಗ್ ಮತ್ತು ರಸ್ತೆ ನಿರ್ವಹಣೆ ಮಾಡುವ ಸಿಬ್ಬಂದಿಯನ್ನು ‘ಸಾರ್ವಜನಿಕ ಸೇವಕ’ರೆಂದು ಪರಿಗಣಿಸಲಾಗುವುದು. ನಿಯಮ ಮೀರಿ ನಿಲ್ಲಿಸುವ ವಾಹನಗಳಿಗೆ ಚಕ್ರ ಲಾಕ್ ಮಾಡುವ ಹಾಗೂ ಟೋಯಿಂಗ್ ಮಾಡುವ ಅಧಿಕಾರ ಇವರಿಗೆ ಇರಲಿದೆ.

ವಿಶೇಷವಾಗಿ ಸಂಚಾರ ಜಂಕ್ಷನ್‌ಗಳಿಂದ 100 ಮೀಟರ್ ವ್ಯಾಪ್ತಿಯಲ್ಲಿ ಅಥವಾ ಬಸ್ ನಿಲ್ದಾಣದ ಹತ್ತಿರ ವಾಹನಗಳನ್ನು ನಿಲುಗಡೆ ಮಾಡಿದರೆ ವಾಹನ ಸವಾರರ ಚಾಲನಾ ಪರವಾನಗಿ (ಡಿಎಲ್) ಕೂಡ ಸಸ್ಪೆಂಡ್ ಆಗಬಹುದು. ಒಟ್ಟಾರೆಯಾಗಿ, ಬೆಂಗಳೂರಿನ ಅಸ್ತವ್ಯಸ್ತಗೊಂಡಿರುವ ಟ್ರಾಫಿಕ್ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಹಳಿಗೆ ತರಲು ಸರ್ಕಾರ ಬಿಗಿ ಕ್ರಮ ಕೈಗೊಂಡಿದೆ. ಇನ್ನುಮುಂದೆ ರಸ್ತೆಯಲ್ಲಿ ವಾಹನ ನಿಲ್ಲಿಸುವ ಮುನ್ನ ಸವಾರರು ಹತ್ತು ಬಾರಿ ಯೋಚಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

About The Author