ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದ ನಡುವೆ ಶಾಸಕ ಹಾಗೂ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ವ್ಯವಸ್ಥಾಪಕ ನಿರ್ದೇಶಕ ಟಿ.ಎ. ಶರವಣ ಅವರ ನಿವಾಸದಲ್ಲಿ ಶುಕ್ರವಾರ ಭಕ್ತಿ ಹಾಗೂ ಸಂಪ್ರದಾಯದ ಸಮ್ಮಿಲನದಲ್ಲಿ ವರಮಹಾಲಕ್ಷ್ಮಿ ಪೂಜೆ ಅದ್ಧೂರಿಯಾಗಿ ನೆರವೇರಿತು.
ಸಾವಿರಾರು ಹೂವುಗಳಿಂದ ಅಲಂಕಾರಗೊಂಡ ಪೂಜಾ ಮಂಟಪ, ದೀಪಗಳ ಕಂಗೊಳ ಹಾಗೂ ಭಕ್ತಿಮಯ ವಾತಾವರಣದಲ್ಲಿ ತಾಯಿ ವರಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕುಟುಂಬ ಸದಸ್ಯರು, ಬಂಧು-ಬಳಗ ಮತ್ತು ಆಹ್ವಾನಿತ ಅತಿಥಿಗಳು ಪೂಜೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು.
ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಹಿರಿಯ ನಟಿ ತಾರಾ ಅನುರಾಧ, ನಟಿ ಅಪೂರ್ವ, ನಟ-ನಿರ್ದೇಶಕ ತರುಣ್ ಸುಧೀರ್ ಹಾಗೂ ಅವರ ಪತ್ನಿ ಸೋನಲ್, ಜೊತೆಗೆ ಹಿರಿಯ ನಟಿ ಸುಧಾರಾಣಿ ಪೂಜೆಯಲ್ಲಿ ಭಾಗವಹಿಸಿ ಭಕ್ತಿಭಾವದಿಂದ ದೇವಿಯ ದರ್ಶನ ಪಡೆದರು.
ಪೂಜೆ ಬಳಿಕ ಪ್ರಸಾದ ವಿತರಣೆ ನಡೆದಿದ್ದು, ಆಗಮಿಸಿದ್ದ ಗಣ್ಯರು ಹಾಗೂ ಅತಿಥಿಗಳು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಭಕ್ತಿ, ಸಂಪ್ರದಾಯ ಮತ್ತು ಸಿನಿತಾರೆಯರ ಉಪಸ್ಥಿತಿಯಿಂದ ಟಿ.ಎ. ಶರವಣ ಅವರ ನಿವಾಸದ ವರಮಹಾಲಕ್ಷ್ಮಿ ಪೂಜೆ ಈ ಬಾರಿ ವಿಶೇಷ ಮೆರುಗು ಪಡೆದುಕೊಂಡಿತು.

