ಭಾರತ ಜೋಡೋ ಯಾತ್ರೆಯ 5ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಾಗೂ ಮಣಿಪುರದಿಂದ ಮುಂಬೈನವರೆಗೆ ಒಟ್ಟು ಹತ್ತು ಸಾವಿರ ಕಿಲೋಮೀಟರ್‌ಗಳಿಗೂ ಅಧಿಕ ದೂರ ನಡೆದು ರಾಹುಲ್ ಗಾಂಧಿ ಅವರು ಮಹಾತ್ಮ ಗಾಂಧಿಯವರ ದಂಡಿ ಯಾತ್ರೆಯಂತೆ ಇತಿಹಾಸ ನಿರ್ಮಿಸಿದ್ದಾರೆ ಎಂದು ಬಣ್ಣಿಸಿದ್ದಾರೆ.
ದೇಶದಲ್ಲಿ ಬಿಜೆಪಿಯು ಸೃಷ್ಟಿಸಿದ್ದ ಕೋಮು ದ್ವೇಷ, ಹಿಂಸಾಚಾರ ಮತ್ತು ದೌರ್ಜನ್ಯಗಳ ವಿರುದ್ಧ ಜನರಲ್ಲಿ ಆತ್ಮಸ್ಥೈರ್ಯ ತುಂಬಲು ರಾಹುಲ್ ಗಾಂಧಿ ಈ ಪಾದಯಾತ್ರೆ ನಡೆಸಿದರು. ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಅವರು ಸದಾ ಧ್ವನಿಯಾಗಿದ್ದಾರೆ ಎಂದು ಹರಿಪ್ರಸಾದ್ ಸ್ಮರಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನರ ಆಶಯದಂತೆ ಶಾಂತಿ ಮತ್ತು ನೆಮ್ಮದಿ ನೆಲೆಸಿದೆ. ಸಮಾಜದಲ್ಲಿ ಕೋಮುದ್ವೇಷ ಹರಡುತ್ತಿರುವುದನ್ನು ತಡೆಟ್ಟಿರುವುದು ನಮ್ಮ ಸರ್ಕಾರದ ದೊಡ್ಡ ಸಾಧನೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಅವರು, ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲಕ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಲು ಯತ್ನಿಸಲಾಗಿತ್ತು. ಇದರ ವಿರುದ್ಧ ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿಗಳು ನಡೆಸಿದ ಹೋರಾಟದಿಂದಾಗಿ ಪ್ರಧಾನಿ ಮೋದಿ ಮಂಡಿಯೂರುವಂತಾಯಿತು ಎಂದು ವಾಗ್ದಾಳಿ ನಡೆಸಿದ್ದಾರೆ. 56 ಇಂಚಿನ ಎದೆ ಇದೆ ಎಂದು ಹೇಳಿಕೊಳ್ಳುವ ಸುಳ್ಳಿನ ಸರದಾರ ಕೊನೆಗೆ ಜನರನ್ನು ಎದುರಿಸಲಾಗದೆ ಹಿಂದೆ ಸರಿದರು ಎಂದು ಬಿ.ಕೆ. ಹರಿಪ್ರಸಾದ್ ತೀವ್ರವಾಗಿ ಟೀಕಿಸಿದ್ದಾರೆ.




