ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ಸಿಎಂ ಹುದ್ದೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ ನಡೆದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಆಗಲು ಯಾರೂ ಅವಕಾಶ ಕೊಡುವುದಿಲ್ಲ, ನಾವೇ ಅದನ್ನು ಗಿಟ್ಟಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಪಿ.ಜಿ.ಆರ್. ಸಿಂಧ್ಯಾ ಅವರ ಹುಟ್ಟುಹಬ್ಬದ ಸಂಭ್ರಮ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಸಿಂಧ್ಯಾ ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಮತ್ತು ಯೋಗ್ಯತೆ ಇತ್ತು. ತಾವು ಎರಡು ಬಾರಿ ಮುಖ್ಯಮಂತ್ರಿ ಆದೇವು ಆದರೆ ಸಿಂಧ್ಯಾ ಆಗಲಿಲ್ಲ ಎಂದು ಸ್ಮರಿಸಿದ್ದಾರೆ. ರಾಜಕೀಯದಲ್ಲಿ ಅವಕಾಶವನ್ನು ಯಾರೂ ಸುಮ್ಮನೆ ಬಿಟ್ಟುಕೊಡುವುದಿಲ್ಲ, ಅದಕ್ಕೆ ತಕ್ಕಂತೆ ಶ್ರಮಪಟ್ಟು ನಾವೇ ಪಡೆದುಕೊಳ್ಳಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಸಿಂಧ್ಯಾ ಅವರು ಯಾವ ಇಲಾಖೆ ಸಿಕ್ಕರೂ ಅದನ್ನು ಅಚ್ಚುಕಟ್ಟಾಗಿ, ಶಿಸ್ತಿನಿಂದ ನಿರ್ವಹಿಸುವ ಅಪ್ಪಟ ಹಾರ್ಡ್‌ವರ್ಕರ್ ಎಂದು ಪ್ರಶಂಸಿಸಿದರು. ರಾಮಕೃಷ್ಣ ಹೆಗಡೆ ಅವರ ಮಂತ್ರಿಮಂಡಲದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡ ಸಿದ್ದರಾಮಯ್ಯ, ದೇವೆಗೌಡರು ಮುಖ್ಯಮಂತ್ರಿಯಾದಾಗ ನಡೆದ ಸಚಿವ ಸಂಪುಟ ರಚನೆಯ ಚರ್ಚೆ ಹಾಗೂ ಹಣಕಾಸು ಇಲಾಖೆ ತಮಗೆ ಸಿಕ್ಕಿದ ಹಿಂದಿನ ರೋಚಕ ಹಾಗೂ ಮರೆಯಲಾಗದ ಕ್ಷಣಗಳನ್ನು ಸಭೆಯಲ್ಲಿ ಹಂಚಿಕೊಂಡು ನಗು ಮೂಡಿಸಿದರು.
ತಮ್ಮ ವಯಸ್ಸು ಹಾಗೂ ಸಿಂಧ್ಯಾ ಅವರ ಜತೆಗಿನ ಒಡನಾಟವನ್ನು ಹಾಸ್ಯ ಚಟಾಕಿಗಳೊಂದಿಗೆ ಬಿಚ್ಚಿಟ್ಟ ಸಿದ್ದರಾಮಯ್ಯ, ಸಿಂಧ್ಯಾ ಅವರಿಗೆ ಉತ್ತಮ ಆರೋಗ್ಯ ಮತ್ತು ಆಯಸ್ಸು ದೊರೆತು, ಇನ್ನಷ್ಟು ಕಾಲ ಸಮಾಜ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು. ರಾಜಕೀಯ ದಿಗ್ಗಜರ ಈ ಒಡನಾಟದ ಮಾತುಗಳು ಸಭೆಯಲ್ಲಿ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.




