ಮಧುರಾಂತಕಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣಕಳೆಗುಟ್ಟಿದ್ದು, ಟಿವಿಕೆ ಅಭ್ಯರ್ಥಿ ಮರಗತಂ ಕುಮಾರವೇಲ್ ಪರವಾಗಿ ಪ್ರಚಾರ ನಡೆಸಿದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ಚಂದ್ರಶೇಖರ್ ವಿಜಯ್, ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷಗಳ ಟೀಕೆಗಳಿಗೆ ತಾನು ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಸರ್ಕಾರದ ವಿರುದ್ಧ ಡಿಎಂಕೆ ಮಾಡುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿರುವ ವಿಜಯ್, ‘ದಪ್ಪ ಚರ್ಮದ ಬಗ್ಗೆ ನೀವು ಕೇಳಿದ್ದೀರಾ? ಅದಕ್ಕೆ ಜಗತ್ತಿನಲ್ಲಿರುವ ಏಕೈಕ ಉದಾಹರಣೆ ನಾನು. ರಾಜಕೀಯಕ್ಕೆ ಬರುವ ಮುನ್ನವೇ ಎಲ್ಲವನ್ನೂ ನೋಡಿದ್ದೇನೆ, ಇಂತಹ ಟೀಕೆಗಳು ನನಗೆ ಹೊಸದಲ್ಲ’ ಎಂದು ವ್ಯಂಗ್ಯವಾಡಿದ್ದಾರೆ. ಹೊಸ ತಲೆಮಾರಿಗೆ ಹಳೇ ಭ್ರಷ್ಟಾಚಾರಗಳು ಗೊತ್ತಿಲ್ಲ ಎಂದು ಡಿಎಂಕೆ ಭಾವಿಸಿದೆ ಎಂದು ಕಿಡಿಕಾರಿದ್ದಾರೆ.
ಸರ್ಕಾರಿಯಾ ಆಯೋಗದ ತನಿಖಾ ವರದಿಯನ್ನು ಉಲ್ಲೇಖಿಸಿದ ವಿಜಯ್, ತಮ್ಮ ಟಿವಿಕೆ ಸರ್ಕಾರ ಎಂದಿಗೂ ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಭವಿಷ್ಯದ ರಾಜಕೀಯ ಹೋರಾಟವು ಕೇವಲ ಎರಡು ಶಕ್ತಿಗಳ ನಡುವೆ ಮಾತ್ರ ಇರಲಿದ್ದು, ಒಂದು ಕಡೆ ಶುದ್ಧವಾದ ಟಿವಿಕೆ ಆದರೆ ಮತ್ತೊಂದು ಕಡೆ ದುಷ್ಟ ಡಿಎಂಕೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಅಕ್ಟೋಬರ್ 6ರಂದು ನಡೆಯಲಿರುವ ಈ ಉಪಚುನಾವಣೆಯು ರಾಜ್ಯದ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ವಿಜಯ್ ಅವರ ಈ ತೀವ್ರ ವಾಗ್ದಾಳಿ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.




