ಮುಂದಿನ ವರ್ಷ ಅಂದರೆ 2027ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತ್ತೊಮ್ಮೆ ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರಾ ಎಂಬ ಕುತೂಹಲಕ್ಕೆ ಮೆಗಾ ಸಮೀಕ್ಷೆಯು ಸ್ಪಷ್ಟ ಉತ್ತರ ನೀಡಿದೆ. ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆ ಹಾಗೂ ಸರ್ಕಾರದ ಕಾರ್ಯಕ್ಷಮತೆಯು ಮುಂಚೂಣಿಯಲ್ಲಿದೆ ಎಂದು ಸಮೀಕ್ಷೆ ತಿಳಿಸಿದೆ.
‘ಪ್ವಾಲ್ಯೂ ಅನಾಲಿಟಿಕ್ಸ್’ ಸಹಯೋಗದೊಂದಿಗೆ ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳಲ್ಲಿ ಸುಮಾರು 31 ಸಾವಿರಕ್ಕೂ ಅಧಿಕ ಜನರನ್ನು ಒಳಗೊಂಡು ನಡೆಸಲಾದ ಈ ಸಮೀಕ್ಷೆಯಲ್ಲಿ, ಯೋಗಿ ಆದಿತ್ಯನಾಥ್ ಅವರು ಚುನಾವಣೆಯ ‘ಸ್ಟಾರ್ ಪರ್ಫಾಮರ್’ ಆಗಿ ಹೊರಹೊಮ್ಮಲಿದ್ದಾರೆ ಎಂದು ವರದಿ ಹೇಳಿದೆ.
ಸಮೀಕ್ಷೆಯ ಪ್ರಮುಖ ಅಂಶಗಳ ಪ್ರಕಾರ, ಒಟ್ಟು ಶೇ. 77.1ರಷ್ಟು ಜನರು ಪ್ರಸ್ತುತ ಯೋಗಿ ಆದಿತ್ಯನಾಥ್ ಸರ್ಕಾರದ ಆಡಳಿತ ಹಾಗೂ ಕಾರ್ಯಕ್ಷಮತೆಯಿಂದ ಸಂಪೂರ್ಣ ಅಥವಾ ಭಾಗಶಃ ತೃಪ್ತರಾಗಿದ್ದಾರೆ. ಇನ್ನು ಮುಂದಿನ ಮುಖ್ಯಮಂತ್ರಿಯಾಗಲು ಯಾರು ಸೂಕ್ತ ಎಂಬ ಪ್ರಶ್ನೆಗೆ, ಬರೋಬ್ಬರಿ ಶೇ. 66.2ರಷ್ಟು ಜನರು ಯೋಗಿ ಆದಿತ್ಯನಾಥ್ ಅವರ ಹೆಸರನ್ನು ಸೂಚಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ಪರ ಶೇ. 24.4ರಷ್ಟು, ಮಾಯಾವತಿ ಪರ ಶೇ. 5ರಷ್ಟು ಮತ್ತು ಚಂದ್ರಶೇಖರ್ ಆಜಾದ್ ಪರ ಶೇ. 1.8ರಷ್ಟು ಜನರು ಮಾತ್ರ ಒಲವು ತೋರಿದ್ದಾರೆ. ವಿಶೇಷವೆಂದರೆ, ವಿರೋಧ ಪಕ್ಷಗಳಾದ ಎಸ್ಪಿ-ಕಾಂಗ್ರೆಸ್ ಬೆಂಬಲಿಗರಲ್ಲಿಯೂ ಶೇ. 11ರಷ್ಟು ಜನರು ಯೋಗಿ ಅವರ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಶೇ. 66.6ರಷ್ಟು ಜನರು ವಿಶ್ವಾಸ ವ್ಯಕ್ತಪಡಿಸಿದ್ದರೆ, ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟದ ಪರ ಶೇ. 26.5ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ಉತ್ತಮ ಶಿಕ್ಷಣ ಪಡೆದವರು, ಹಿರಿಯ ನಾಗರಿಕರು ಹಾಗೂ ರೈತ ವರ್ಗದಿಂದ ಯೋಗಿ ಆದಿತ್ಯನಾಥ್ ಅವರಿಗೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಈ ಎಲ್ಲಾ ಸಮೀಕ್ಷಾ ವರದಿಗಳು ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೊಮ್ಮೆ ದೊಡ್ಡ ಗೆಲುವಿನ ಮುನ್ಸೂಚನೆ ನೀಡಿವೆ.




