ರಾಯರ ಮಂತ್ರಾಲಯದ ದರ್ಶನಕ್ಕೆ ತೆರಳುವ ಕರ್ನಾಟಕದ ಭಕ್ತರಿಗೆ KSRTC ಸಿಹಿಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಬೆಂಗಳೂರಿಗೆ ಬಾರದೇ ನೇರವಾಗಿ ತಮ್ಮದೇ ಜಿಲ್ಲೆಗಳಿಂದ ಮಂತ್ರಾಲಯಕ್ಕೆ ಪ್ರಯಾಣಿಸಲು ಅನುಕೂಲವಾಗುವಂತೆ, ಹಾಸನ ಮತ್ತು ಮಂತ್ರಾಲಯ ನಡುವೆ ನೂತನ ‘ಪಲ್ಲಕ್ಕಿ’ ನಾನ್-ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಲಾಗಿದೆ.
ಈ ಹೊಸ ಸೌಲಭ್ಯದಿಂದಾಗಿ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳ ಪ್ರಯಾಣಿಕರಿಗೆ ಮಂತ್ರಾಲಯಕ್ಕೆ ತೆರಳಲು ಅತ್ಯಂತ ಸುಲಭವಾದ ನೇರ ಸಾರಿಗೆ ವ್ಯವಸ್ಥೆ ಲಭ್ಯವಾದಂತಾಗಿದೆ. ಈ ಬಸ್ನ ವೇಳಾಪಟ್ಟಿ ಹಾಗೂ ಮಾರ್ಗದ ವಿವರ ಗಮನಿಸುವುದಾದರೆ, ಹಾಸನ ಮತ್ತು ಮಂತ್ರಾಲಯ ಎರಡೂ ಕಡೆಗಳಿಂದಲೂ ರಾತ್ರಿ 7:30ಕ್ಕೆ ಬಸ್ ಹೊರಡಲಿದೆ. ರಾತ್ರಿ ಪೂರ್ತಿ ಪ್ರಯಾಣಿಸಿ ಮರುದಿನ ಬೆಳಗ್ಗೆ 6:30ರ ಸುಮಾರಿಗೆ ತಲುಪಬೇಕಾದ ಸ್ಥಳ ತಲುಪಬಹುದು.
ಹಾಸನದಿಂದ ಹೊರಡುವ ಈ ಬಸ್ ಅರಸೀಕೆರೆ, ಕಡೂರು, ಭದ್ರಾವತಿ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಆದೋನಿ ಮಾರ್ಗವಾಗಿ ಸಂಚರಿಸಲಿದೆ. ಇದರಿಂದ ಹಾಸನ, ಅರಸೀಕೆರೆ, ಕಡೂರು, ಶಿವಮೊಗ್ಗ, ಭದ್ರಾವತಿ, ಚಿತ್ರದುರ್ಗ ಹಾಗೂ ಬಳ್ಳಾರಿ ಸುತ್ತಮುತ್ತಲಿನ ಭಕ್ತರಿಗೆ ರಾತ್ರಿ ಪ್ರಯಾಣಿಸಿ ಬೆಳಗ್ಗೆ ನಿರಾಳವಾಗಿ ರಾಯರ ದರ್ಶನ ಪಡೆಯಲು ಅನುಕೂಲವಾಗಲಿದೆ.
ಇನ್ನು ಟಿಕೆಟ್ ದರದ ವಿವರ ನೋಡುವುದಾದರೆ, ಹಾಸನದಿಂದ ಮಂತ್ರಾಲಯಕ್ಕೆ ಪ್ರತಿ ವ್ಯಕ್ತಿಗೆ 1,070 ರೂಪಾಯಿ ಹಾಗೂ ಶಿವಮೊಗ್ಗದಿಂದ 950 ರೂಪಾಯಿ ನಿಗದಿಪಡಿಸಲಾಗಿದೆ. ಪ್ರಯಾಣಿಕರು KSRTCಯ ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 7760990520 ನಂಬರ್ಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದ್ದು, ರಾಯರ ಭಕ್ತರು ಈ ನೂತನ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಸಾರಿಗೆ ಇಲಾಖೆ ಕೋರಿದೆ.




