ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಉಚಿತ ವಿದ್ಯುತ್ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಲಕ್ಷಾಂತರ ಗ್ರಾಹಕರಿಗೆ ಬೆಸ್ಕಾಂ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಹೌದು ‘ಅರ್ಹ ಫಲಾನುಭವಿಗಳನ್ನು ಮರುಪರಿಶೀಲಿಸುವ ಕಟ್ಟುನಿಟ್ಟಿನ ಪ್ರಕ್ರಿಯೆ ಆರಂಭವಾಗಿದ್ದು, ಬೆಸ್ಕಾಂ ವ್ಯಾಪ್ತಿಯ ಸುಮಾರು 16 ಲಕ್ಷ ಫಲಾನುಭವಿಗಳು ಈ ಯೋಜನೆಯಿಂದ ಹೊರಬೀಳುವ ಗಂಭೀರ ಭೀತಿ ಎದುರಾಗಿದೆ.
ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ ಈ ಯೋಜನೆಯ ದುರುಪಯೋಗ ತಡೆಯಲು ಇಂಧನ ಇಲಾಖೆಯು ಮರುಪರಿಶೀಲನಾ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಇದು ಫಲಾನುಭವಿಗಳ ನಿದ್ರೆ ಕೆಡಿಸಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 69 ಲಕ್ಷ ಫಲಾನುಭವಿಗಳಿದ್ದು, ಈ ಪೈಕಿ 16 ಲಕ್ಷ ಮಂದಿಯ ನಿಖರ ಮಾಹಿತಿ ಹಾಗೂ ದಾಖಲೆಗಳು ಸಿಬ್ಬಂದಿಗೆ ಲಭ್ಯವಾಗಿಲ್ಲ. ಮೀಟರ್ ರೀಡರ್ಗಳು ಹಾಗೂ ಸಿಬ್ಬಂದಿ ಮೂರಕ್ಕೂ ಹೆಚ್ಚು ಬಾರಿ ಮನೆಗಳಿಗೆ ಭೇಟಿ ನೀಡಿದರೂ ಮನೆಗಳಿಗೆ ಬೀಗ ಹಾಕಿರುವುದು ಅಥವಾ ಬಾಡಿಗೆದಾರರು ಸ್ಥಳಾಂತರಗೊಂಡಿರುವುದು ಕಂಡುಬಂದಿದೆ. ಇದರ ಜೊತೆಗೆ ಆದಾಯ ತೆರಿಗೆ ಪಾವತಿದಾರರು ಹಾಗೂ ಕೆಲವರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಹಾಗಾಗಿ ದಾಖಲೆಗಳನ್ನು ಸಲ್ಲಿಸದ ಗ್ರಾಹಕರಿಗೆ ಬೆಸ್ಕಾಂ ಈಗ ಅಂತಿಮ ಅವಕಾಶ ನೀಡಿದ್ದು, ಅಕ್ಟೋಬರ್ 31ರ ಒಳಗಾಗಿ ಹತ್ತಿರದ ಬೆಸ್ಕಾಂ ಉಪವಿಭಾಗ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸಬೇಕು. ಒಂದು ವೇಳೆ ಗಡುವಿನೊಳಗೆ ಮಾಹಿತಿ ನೀಡದಿದ್ದರೆ ಉಚಿತ ವಿದ್ಯುತ್ ಸೌಲಭ್ಯ ರದ್ದಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.




