ಪ್ರಸಕ್ತ ವರ್ಷದ ಹಿಂಗಾರು ಬೆಳೆ ಅತ್ಯಂತ ಸುಭಿಕ್ಷವಾಗಿರಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಗಾರಿನ ಬಗ್ಗೆ ತಾವು ನುಡಿದಿದ್ದ ಭವಿಷ್ಯದಂತೆ ಈ ಹಿಂದೆ ಮಳೆಯಿಲ್ಲದೆ ತೊಂದರೆಯಾಗಿತ್ತು. ಆದರೆ, ಈಗ ಹಿಂಗಾರು ಮಳೆ ಚೆನ್ನಾಗಿ ಆಗಲಿದ್ದು, ಜನರಿಗೆ ಸುಭಿಕ್ಷೆ ಹಾಗೂ ನೆಮ್ಮದಿ ಸಿಗಲಿದೆ ಎಂದು ತಿಳಿಸಿದ್ದಾರೆ.
ಮುಂಗಾರು ಮಳೆ ಸರಿಯಾಗಿ ಆಗುವುದಿಲ್ಲ, ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ, ಅನ್ನಕ್ಕೆ ಕೊರತೆಯಾಗುತ್ತದೆ ಎಂದು ಈ ಹಿಂದೆ ಹೇಳಿದ್ದೆ. ಅದೇ ಪ್ರಕಾರ ಸಂಭವಿಸಿದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಹಿಂಗಾರು ಮಳೆಯಾಗಲಿದ್ದು, ಜಲಚರಗಳಿಗೂ ಒಳ್ಳೆಯದಾಗಲಿದೆ. ಜನ-ಜಾನುವಾರುಗಳಿಗೆ ಸಮೃದ್ಧಿ ಸಿಗಲಿದೆ ಎಂದು ಸ್ವಾಮೀಜಿ ಭರವಸೆ ವ್ಯಕ್ತಪಡಿಸಿದರು.
ಇದೇ ವೇಳೆ ಅಖಂಡ ಕರ್ನಾಟಕದ ಪರಂಪರೆಯ ಕುರಿತು ಮಾತನಾಡಿದ ಶ್ರೀಗಳು, ‘ಅಖಂಡ ಕರ್ನಾಟಕ ಒಂದಾಗಿ ಹೋಗಬೇಕು. ಮೈಸೂರಿನಲ್ಲಿ ನಡೆಯುವಂತೆ ಉತ್ತರ ಕರ್ನಾಟಕದಲ್ಲೂ ಜಂಬೂ ಸವಾರಿ ಆಯೋಜಿಸುತ್ತಿರುವುದು ಏಕತಾ ಮನೋಭಾವದ ಪ್ರತೀಕ’ ಎಂದರು. ಮನುಷ್ಯ ಮನುಷ್ಯನಾಗಿ ಬಾಳಲು ಹಿರಿಯರ ಆದರ್ಶಗಳು ಮುಖ್ಯವಾಗಿದ್ದು, ದಸರಾ ಉತ್ಸವಗಳು ಆ ಸಂಸ್ಕೃತಿಯ ಸಂಕೇತವಾಗಿವೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ರಾಜಕಾರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಶ್ರೀಗಳು, ರಾಜಕಾರಣದ ಬಗ್ಗೆ ನನಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ ಎಂದರು. ಎಲ್ಲರಿಗೂ ಒಳ್ಳೆಯದಾಗಲಿ, ದೈವ ಕೃಪೆ ಇರಲಿ ಎಂದು ಹಾರೈಸಿದರು. ರೋಗ-ರುಜಿನಗಳು ದೂರಾಗಿ, ಮಳೆ-ಬೆಳೆ ಚೆನ್ನಾಗಿ ಬೆಳೆದು ನಾಡಿನ ಜನತೆಗೆ ಶಾಂತಿ ಹಾಗೂ ನೆಮ್ಮದಿ ಸಿಗಲಿ ಎಂದು ಕೋಡಿಮಠದ ಶ್ರೀಗಳು ಪ್ರಾರ್ಥಿಸಿದರು.




