ಶಿವಮೊಗ್ಗ ದಸರಾ ಆನೆ ಅವಘಡದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ!

ಬೆಂಗಳೂರು – ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ಬೆದರಿ ಓಡಿದ ಘಟನೆ ಹಿನ್ನೆಲೆಯಲ್ಲಿ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ರಾಮಲಿಂಗ ರೆಡ್ಡಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಮುಂದಿನ ವರ್ಷದಿಂದ ದಸರಾ ಜಂಬೂಸವಾರಿ ನಡೆಸುವ ಮೊದಲು ಆನೆಗಳಿಗೆ ಕನಿಷ್ಠ 20 ದಿನಗಳಿಂದ ಒಂದು ತಿಂಗಳವರೆಗೆ ನುರಿತ ಮಾವುತರು ಹಾಗೂ ಕಾವಾಡಿಗರ ನೇತೃತ್ವದಲ್ಲಿ ಕಡ್ಡಾಯವಾಗಿ ತಾಲೀಮು ನಡೆಸುವ ವ್ಯವಸ್ಥೆ ಕಲ್ಪಿಸುವಂತೆ ಅರಣ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ನಡೆದ ಅಚಾತುರ್ಯದ ಕುರಿತು ಸಚಿವ ರಾಮಲಿಂಗ ರೆಡ್ಡಿ ಅವರು ಶಿವಮೊಗ್ಗ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಘಟನೆಯ ವಿವರಗಳನ್ನು ಪಡೆದುಕೊಂಡರು.

ಜಂಬೂಸವಾರಿ ವೇಳೆ ಆನೆ ಬೆದರಿ ಓಡಲು ಕಾರಣವೇನು? ಮುಂಜಾಗ್ರತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳಲಾಗಿತ್ತೇ? ಸಾರ್ವಜನಿಕರಿಗೆ ಯಾವುದೇ ತೊಂದರೆ ಅಥವಾ ಅಪಾಯ ಉಂಟಾಗಿದೆಯೇ? ಆನೆ ಓಡಿದ ಸಂದರ್ಭದಲ್ಲಿ ವಾಹನಗಳಿಗೆ ಎಷ್ಟು ಹಾನಿಯಾಗಿದೆ? ಎಂಬಿತ್ಯಾದಿ ವಿಷಯಗಳ ಕುರಿತು ಮಾಹಿತಿ ಪಡೆದರು.

ದಸರಾ ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಉತ್ಸವಗಳಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಮುಂಚಿತವಾಗಿಯೇ ಸೂಕ್ತ ತರಬೇತಿ ನೀಡುವುದು ಅತ್ಯಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಜಂಬೂಸವಾರಿ ನಡೆಸುವ ಮೊದಲು ಕನಿಷ್ಠ 20 ದಿನಗಳಿಂದ ಒಂದು ತಿಂಗಳವರೆಗೆ ನುರಿತ ಮಾವುತರು ಮತ್ತು ಕಾವಾಡಿಗರ ಮೂಲಕ ಆನೆಗಳಿಗೆ ನಿರಂತರ ತಾಲೀಮು ನೀಡಬೇಕು.

ಜನಸಂದಣಿ, ವಾದ್ಯಗಳ ಸದ್ದು, ಮೆರವಣಿಗೆಯ ವಾತಾವರಣ ಹಾಗೂ ಇತರ ಸಂದರ್ಭಗಳಿಗೆ ಆನೆಗಳನ್ನು ಸಿದ್ಧಗೊಳಿಸಬೇಕು ಎಂಬ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು
ಎಂದು ನಿರ್ದೇಶನ ನೀಡಿದರು.

ದಸರಾ ಜಂಬೂಸವಾರಿ ಕೇವಲ ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರ್ಯಕ್ರಮವಷ್ಟೇ ಅಲ್ಲ; ಇದು ಜನರ ಭಾವನೆ, ಸಂಪ್ರದಾಯ ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ಮಹತ್ವದ ಆಚರಣೆಯಾಗಿದೆ. ಇಂತಹ ಸಂದರ್ಭದಲ್ಲಿ ಆನೆಗಳು ಬೆದರಿ ಓಡುವುದು ಅಥವಾ ಮೆರವಣಿಗೆ ಸ್ಥಗಿತಗೊಳ್ಳುವಂತಹ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುವುದರ ಜೊತೆಗೆ ಜನರ ಭಾವನೆಗಳಿಗೂ ಧಕ್ಕೆಯುಂಟುಮಾಡಬಹುದು.ಹೀಗಾಗಿ, ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯಗಳು ಮರುಕಳಿಸದಂತೆ ಅಧಿಕಾರಿಗಳು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಸೂಚನೆ ನೀಡಿದರು.

ಆನೆಗಳ ಆರೋಗ್ಯ, ಮಾನಸಿಕ ಸ್ಥಿತಿ, ತರಬೇತಿ, ಜನಸಂದಣಿ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಜಂಬೂಸವಾರಿಗೆ ನಿಯೋಜಿಸುವ ಪ್ರತಿಯೊಂದು ಆನೆಯ ಸಾಮರ್ಥ್ಯ ಮತ್ತು ಸಿದ್ಧತೆಯನ್ನು ಸಮರ್ಪಕವಾಗಿ ಪರಿಶೀಲಿಸಿದ ಬಳಿಕವೇ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

About The Author