ಮಾಜಿ ಪ್ರಧಾನಿಗಳಾದ ಜವಹರಲಾಲ್ ನೆಹರೂ, ಇಂದಿರಾಗಾಂಧಿ ಕೂಡ ಹೇರದಂತಹ ನಿರ್ಬಂಧಗಳನ್ನು ಕಾಂಗ್ರೆಸ್ ಸರ್ಕಾರ ಆರ್ಎಸ್ಎಸ್ ಪಥ ಸಂಚಲನದ ಮೇಲೆ ಹೇರಿದೆ. ಆದರೂ ಎಲ್ಲ ಕಡೆ ಯಶಸ್ವಿಯಾಗಿ ಪಥ ಸಂಚಲನ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ವಿಜಯದಶಮಿ ಅಂಗವಾಗಿ ಜಯನಗರದಲ್ಲಿ ಆಯೋಜಿಸಿದ್ದ ಪಥ ಸಂಚಲನದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಈ ಬಾರಿ ಅನೇಕ ನಿರ್ಬಂಧಗಳನ್ನು ಹೇರಿದೆ. ಕೊನೆಯ ಸಮಯದವರೆಗೂ ಪಥ ಸಂಚಲನಕ್ಕೆ ಅನುಮತಿ ನೀಡಲು ಸತಾಯಿಸಲಾಗಿದೆ. ಮಾಜಿ ಪ್ರಧಾನಿಗಳಾದ ನೆಹರು ಹಾಗೂ ಇಂದಿರಾಗಾಂಧಿ ಕೂಡ ಹೀಗೆ ಮಾಡಿಲ್ಲ. ಕಿರುಕುಳದ ನಡುವೆಯೂ ಆರ್ಎಸ್ಎಸ್ನಿಂದ ವಿಜೃಂಭಣೆಯಿಂದ ಹಾಗೂ ಶಾಂತಿಯಿಂದ ಪಥ ಸಂಚಲನ ನಡೆಸಲಾಗಿದೆ ಎಂದರು.
ಆರ್ಎಸ್ಎಸ್ಗೆ ಅನುದಾನ ಬರುತ್ತಿದೆ ಎಂದು ಆರೋಪ ಮಾಡುವುದಾದರೆ, ಕಾಂಗ್ರೆಸ್ ಪಕ್ಷಕ್ಕೆ ಎಲ್ಲಿಂದ ಹಣ ಬರುತ್ತಿದೆ ಎಂದು ಕೇಳಬೇಕಾಗುತ್ತದೆ. ಕಾಂಗ್ರೆಸ್ಗೆ ಪಾಕಿಸ್ತಾನದಿಂದ, ಬಾಂಗ್ಲಾದೇಶದಿಂದ, ಅಮೆರಿಕದಿಂದ ಸಹಾಯಧನ ಬರುತ್ತಿದೆಯೇ? ಆರ್ಎಸ್ಎಸ್ ವಿದೇಶದಿಂದ ಹಣ ಕೇಳುವುದಿಲ್ಲ. ಕಾಕ್ರೋಚ್ ಜನತಾ ಪಾರ್ಟಿಯೊಂದಿಗೆ ಶಾಮೀಲಾದ ಕಾಂಗ್ರೆಸ್ ಪಕ್ಷ ಹೊರದೇಶಗಳಿಂದ ಹಣ ಬರುವಂತೆ ಮಾಡಿ ಆ ಹಣವನ್ನು ತಾನೇ ಪಡೆದುಕೊಂಡಿದೆ. ಆ ರೀತಿ ಸಂಘ ಎಂದಿಗೂ ಮಾಡುವುದಿಲ್ಲ. ದೇಶಪ್ರೇಮವನ್ನು ಬೆಳೆಸುವ ಕೆಲಸವನ್ನು ಮಾತ್ರ ಸಂಘ ಮಾಡುತ್ತದೆ. ಭಾರತಮಾತೆಗೆ ಜೈ ಎನ್ನುವ, ವಂದೇಮಾತರಂ ಎನ್ನುವ ಪ್ರೇರಣೆಯನ್ನು ಸಂಘ ನೀಡುತ್ತದೆ. ಆರ್ಎಸ್ಎಸ್ ಬಗ್ಗೆ ಮಾತಾಡುವಾಗ ಸಚಿವ ಪ್ರಿಯಾಂಕ್ ಖರ್ಗೆ ಹುಷಾರಾಗಿರಬೇಕು. ಇಲ್ಲವಾದರೆ ಬೀದಿಗಳಲ್ಲಿ ಓಡಿಸುತ್ತಾರೆ. ಇದೇ ಮಾತನ್ನು ಮುಖ್ಯಮಂತ್ರಿಗಳಿಂದ ಹೇಳಿಸಲಿ. ಎಲ್ಲದಕ್ಕೂ ಇವರೇ ಮಾತಾಡುತ್ತಾರೆ. ಮುಖ್ಯಮಂತ್ರಿ ಮೌನ ವ್ರತ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರು.
ಕಳೆದ ನೂರು ವರ್ಷಗಳಿಂದ ಪ್ರತಿ ವಿಜಯಶಮಿಯ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪಥ ಸಂಚಲನ ನಡೆಯುತ್ತಿದೆ. ಇದು ದೇಶಾದ್ಯಂತ ನಡೆಯುತ್ತಿದ್ದು, 50 ವರ್ಷಗಳಿಂದ ನಾನು ಸಂಘದ ಸ್ವಯಂಸೇವಕನಾಗಿ ಭಾಗವಹಿಸುತ್ತಿದ್ದೇನೆ. ಈ ಕುರಿತು ನನಗೆ ಬಹಳ ಹೆಮ್ಮೆ ಇದೆ. ಆರ್ಎಸ್ಎಸ್ ಎಂದರೆ ದೇಶಾಭಿಮಾನ ಬೆಳೆಸುವ ಹಾಗೂ ದೇಶಕ್ಕೆ ಸಂಕಷ್ಟ ಬಂದಾಗ ದೇಶದ ಜೊತೆ ನಿಲ್ಲುವ ಸಂಘಟನೆ. ಇದು ಸಾಮಾಜಿಕ ಸೇವಾ ಸಂಘಟನೆ. ಪ್ರಕೃತಿ ವಿಕೋಪಗಳಾದಾಗ, ಯುದ್ಧಗಳಾದಾಗ ದೇಶದ ಪರವಾಗಿ ನಿಲ್ಲುವ ಕೆಲಸವನ್ನು ಆರ್ಎಸ್ಎಸ್ ಮಾಡಿದೆ. 175 ದೇಶಗಳಲ್ಲಿ ಸಂಘ ಕೆಲಸ ಮಾಡುತ್ತಿದೆ ಎಂದರು.




