ಆಂಧ್ರಪ್ರದೇಶದ ಸುಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನಕ್ಕೆ ಬರುವ ಲಕ್ಷಾಂತರ ಭಕ್ತರು ದೇವರಿಗೆ ಹರಕೆಯಾಗಿ ಮುಡಿ ನೀಡುವುದು ಅನಾದಿ ಕಾಲದ ಸಂಪ್ರದಾಯ. ಆದರೆ ಇತ್ತೀಚಿನ ದಿನಗಳಲ್ಲಿ ಯುವತಿಯರು ಮತ್ತು ಮಹಿಳೆಯರ ಫ್ಯಾಷನ್ ಟ್ರೆಂಡ್ ಬದಲಾಗಿರುವುದು, ತಿರುಪತಿಯ ಕೂದಲ ಹರಾಜಿನಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರುತ್ತಿದೆ. ಹೌದು, ಭಕ್ತರ ನಂಬಿಕೆ ಕಮ್ಮಿಯಾಗಿಲ್ಲ, ಆದರೆ ಕೂದಲಿಗೆ ಹಚ್ಚುವ ರಾಸಾಯನಿಕ ಬಣ್ಣದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ವಿಗ್ ತಯಾರಕರಿಗೆ ದೊಡ್ಡ ಆತಂಕ ಎದುರಾಗಿದೆ.
ತಿರುಪತಿಯ ಕಲ್ಯಾಣಕಟ್ಟೆಯಲ್ಲಿ ಪ್ರತಿದಿನ ಸಾವಿರಾರು ಮಂದಿ ಮುಡಿ ಕೊಡುತ್ತಾರಾದರೂ, ಇತ್ತೀಚಿನ ವರ್ಷಗಳಲ್ಲಿ ಯುವತಿಯರು ತಮ್ಮ ಕೂದಲಿಗೆ ವಿವಿಧ ರಾಸಾಯನಿಕ ಬಣ್ಣಗಳನ್ನು ಹಚ್ಚಿಕೊಳ್ಳುತ್ತಿದ್ದಾರೆ. ಹೀಗಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆಯಿರುವ ‘ರೆಮಿ ಹೇರ್’ ಅಂದರೆ ನೈಸರ್ಗಿಕ ಕಪ್ಪು ಕೂದಲಿನ ಪ್ರಮಾಣ ತಿರುಮಲದಲ್ಲಿ ಗಣನೀಯವಾಗಿ ಕುಸಿದಿದೆ.
ಇತ್ತೀಚಿನ ಟಿಟಿಡಿ ಹರಾಜು ವರದಿಗಳ ಪ್ರಕಾರ, ಕೇವಲ ಶೇ. 9 ರಿಂದ 16ರಷ್ಟು ಮಾತ್ರ ಅಚ್ಚುಕಟ್ಟಾದ ನೈಸರ್ಗಿಕ ಕಪ್ಪು ಕೂದಲು ಲಭ್ಯವಿದ್ದು, ಉಳಿದಂತೆ ಬಿಳಿ ಕೂದಲು ಮತ್ತು ಬಣ್ಣ ಹಚ್ಚಿದ ಕೂದಲಿನ ಪ್ರಮಾಣವೇ ಹೆಚ್ಚಾಗಿದೆ. ಇತ್ತೀಚಿನ ಹರಾಜಿನಲ್ಲಿ ಕೇವಲ 4,800 ಕೆಜಿ ಕಪ್ಪು ಕೂದಲು ಮಾರಾಟವಾದರೆ, ಬಣ್ಣ ಹಚ್ಚಿದ ಹಾಗೂ ಬಿಳಿ ಕೂದಲಿನ ಪ್ರಮಾಣ ಬರೋಬ್ಬರಿ 25,100 ಕೆಜಿಯಷ್ಟಿತ್ತಂತೆ!
ಒಮ್ಮೆ ಕೂದಲಿಗೆ ರಾಸಾಯನಿಕ ಬಣ್ಣ ಹಚ್ಚಿದರೆ ಅದು ತನ್ನ ನೈಸರ್ಗಿಕ ಗುಣವನ್ನು ಕಳೆದುಕೊಳ್ಳುತ್ತದೆ. ಇದರಿಂದ ಅತ್ಯುತ್ತಮ ಗುಣಮಟ್ಟದ ವಿಗ್ಗಳನ್ನು ತಯಾರಿಸಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು. ಅಷ್ಟೇ ಅಲ್ಲ, ನೈಸರ್ಗಿಕ ಕಪ್ಪು ಕೂದಲಿಗೆ ಪ್ರತಿ ಕೆಜಿಗೆ ಬರೋಬ್ಬರಿ 77 ಸಾವಿರ ರೂಪಾಯಿ ಕನಿಷ್ಠ ಬೆಲೆ ಇದ್ದರೆ, ಬಣ್ಣ ಹಚ್ಚಿದ ಕೂದಲಿಗೆ ಕೇವಲ 41 ಸಾವಿರ ರೂಪಾಯಿ ಮಾತ್ರ ಬೆಲೆ ಇದೆ.
ದೇವರ ಮೇಲಿನ ಭಕ್ತಿ ಎಂದಿನಂತೆ ಮುಂದುವರಿದಿದ್ದರೂ, ಈ ಮಾಡರ್ನ್ ಲೈಫ್ಸ್ಟೈಲ್ ಮತ್ತು ಫ್ಯಾಷನ್ ಟ್ರೆಂಡ್ ಭಾರತದ ಕೋಟ್ಯಂತರ ರೂಪಾಯಿ ಹ್ಯೂಮನ್ ಹೇರ್ ರಫ್ತು ಉದ್ಯಮದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದರೆ ತಪ್ಪಾಗಲಾರದು.




