ಎಲೆಕ್ಟ್ರಿಕ್ ಕಾರು, ಸ್ಕೂಟರ್‌ಗಳನ್ನು ನಾವು ಈಗಾಗಲೇ ಬಳಸುತ್ತಿದ್ದು, ರಸ್ತೆಯಲ್ಲಿ ಸದ್ದಿಲ್ಲದೆ ಚಲಿಸುತ್ತಿವೆ. ಮಾರುಕಟ್ಟೆಯಲ್ಲಿ ಇವುಗಳ ಮಾರಾಟ ಹೆಚ್ಚಳವಾಗುತ್ತಿದ್ದಂತೆ, ಬ್ಯಾಟರಿ ಚಾಲಿತ ರೈಲನ್ನು ಹಳಿಯ ಮೇಲೆ ಓಡಿಸಲು ತಯಾರಿ ನಡೆಸಲಾಗುತ್ತಿದೆ. ವಿಶ್ವದ ಮೊದಲ ಬ್ಯಾಟರಿ ಚಾಲಿತ ರೈಲು ನಿರ್ಮಾಣ ಕಾರ್ಯವೊಂದು ಸದ್ದಿಲ್ಲದೆ ಅಮೆರಿಕದಲ್ಲಿ ನಡೆಯುತ್ತಿದೆ.
ವಿಶೇಷತೆ ಎಂದರೇ ಅಮೆರಿಕದಲ್ಲಿ ತಯಾರಿಸಲಾಗುತ್ತಿರುವ ಈ ರೈಲನ್ನು ಬಹುಪಾಲು ಭಾರತದಲ್ಲಿ ವಿನ್ಯಾಸ ಮಾಡಿದ್ದು, ಬ್ಯಾಟರಿ ಚಾಲಿತ ರೈಲು ಇಂಜಿನ್ ಉತ್ಪಾದನೆಯಾಗುತ್ತಿರುವುದು ಮಾತ್ರ ಅಮೆರಿಕದಲ್ಲಿ. ಭಾರತದಲ್ಲಿ ಸಾವಿರದ ಇನ್ನೂರು ಹಾಗೂ ವಿಶ್ವದ್ಯಂತ ಐದು ಸಾವಿರ ತಂತ್ರಜ್ಞರು ಈ ರೈಲು ತಯಾರಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇಪ್ಪತ್ತು ಸಾವಿರ ಬ್ಯಾಟರಿ ಸೆಲ್‌ಗಳನ್ನು ಅಳವಡಿಸಲಾಗುತ್ತಿದ್ದು, ಇದರ ವಿನ್ಯಾಸವನ್ನು ಬೆಂಗಳೂರು ಕೇಂದ್ರ ಘಟಕ ಮಾಡುತ್ತಿರುವುದು ಗಮನರ್ಹ. ಒಂದು ಸಾವಿರ ಟನ್ ಸರಕುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಈ ಬ್ಯಾಟರಿ ಲೋಕೋಮೋಟಿವ್ ಹೊಂದಿರಲಿದೆ.
ವಿಶ್ವದ ಶ್ರೀಮಂತ ಹೂಡಿಕೆದಾರ ಎನಿಸಿಕೊಂಡಿರುವ ವಾರನ್ ಬಫೆಟ್ ಅವರ ಬರ್ಕ್ಶೈರ್ ಹಾಥವೇ ಕಂಪನಿಯ ಮಾಲೀಕತ್ವದ ಬಿಎನ್‌ಎಸ್‌ಎಫ್ ಸಂಸ್ಥೆಯು ರೈಲು ಕಂಪನಿಯ ಜತೆಗೂಡಿ ಅಮೆರಿಕದ ವ್ಯಾಬ್‌ಟೆಕ್ ಸಂಸ್ಥೆ ಬ್ಯಾಟರಿ ಚಾಲಿತ ಲೋಕೋ ಮೋಟಿವ್ ಉತ್ಪಾದಿಸುತ್ತಿದೆ. ಸರಕು ಸಾಗಣೆ ರೈಲಿನಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
ವಿಶ್ವದಲ್ಲೆ ಪ್ರಥಮ ಬಾರಿಗೆ ಅಮೆರಿಕದಲ್ಲಿ ಬ್ಯಾಟರಿ ಚಾಲಿತ ಇಂಜಿನ್ ಉತ್ಪಾದನೆ ನಡೆಯುತ್ತಿದ್ದರೂ, ಬಹುತೇಕ ಭಾಗದ ರೈಲಿನ ವಿನ್ಯಾಸ ನಡೆಯುತ್ತಿರುವುದು ಭಾರತದಲ್ಲಿ ಎನ್ನುವುದು ನಮ್ಮ ಹೆಮ್ಮೆ ಎಂದು ವ್ಯಾಬ್‌ಟೆಕ್ ಕಂಪನಿಯ ಭಾರತೀಯ ಘಟಕದ ಉಪಾಧ್ಯಕ್ಷ ಗೋಪಾಲ ಕೃಷ್ಣ ಮದ ಭೂಷಿ ಅವರು ತಿಳಿಸಿದ್ದಾರೆ.

