ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎನ್ನುವ ಮಾತಿನಂತೆ ಇಲ್ಲೊಬ್ಬ ಪೊರೋ ತನ್ನ ಅಪಾರ ಜ್ಞಾಪಕ ಶಕ್ತಿಯ ಮೂಲಕ ಚಿಕ್ಕ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಮಾಡಿದ್ದಾನೆ.
ಅಂದ ಹಾಗೆ ಈ ದಾಖಲೆ ಬರೆದ ಪೋರನ ಹೆಸರು ಅರ್ಜುನ್ ಅಂತ. ಈತನಿಗೆ ಇನ್ನೂ 2 ವರ್ಷ 10 ತಿಂಗಳು. ತನ್ನ ಅಪಾರ ಬುದ್ದಿ ಶಕ್ತಿಯಿಂದ ಸರಾಗವಾಗಿ 195 ರಾಷ್ಟ್ರಗಳ ಹೆಸರು ಮತ್ತು ಅವುಗಳ ರಾಜಧಾನಿಗಳ ಹೆಸರುಗಳನ್ನು ಕೇವಲ 27 ನಿಮಿಷಗಳಲ್ಲಿ ಹೇಳಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ. 2021ರ ಇಂಡಿಯನ್ ಬುಕ್ ರೇಕರ್ಡ್ಸ್ ನಲ್ಲಿ ಅರ್ಜುನ್ ದಾಖಲೆ ಬರೆದಿದ್ದಾನೆ. ಈ ಮೂಲಕ ಚಿಕ್ಕ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾನೆ. ಇದರೊಂದಿಗೆ 100 ದೇಶಗಳ ಹೆಸರನ್ನು ಹೇಳುವುದಲ್ಲದೆ ಗ್ಲೋಬ್ ನಲ್ಲಿ ದೇಶಗಳನ್ನು ಗುರುತಿಸುತ್ತಾನೆ.
ಪುತ್ರನ ಸಾಧನೆ ನಮಗೆ ಹೆಮ್ಮೆ ಇದ್ದು, ಜವಾಬ್ದಾರಿ ಹೆಚ್ಚಿಸಿದೆ. ಅವನ ಇಚ್ಛೆಯಂತೆ ಮುಂದುವರೆಯುತ್ತಿದ್ದು ರಾಷ್ಟ್ರಕ್ಕೆ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ರೂಪಿಸುತ್ತೇವೆ ಎಂದು ಅರ್ಜುನ್ ತಂದೆ ಡಾ. ಬಸವರಾಜ್ ಹೇಳುತ್ತಾರೆ.
ಬಾಗಲಕೋಟೆಯ ನವನಗರದ ನಿವಾಸಿ ಬಸವರಾಜ್ ಹಾಗೂ ವಿದ್ಯಾಶ್ರೀ ದಂಪತಿಯ ಪುತ್ರ ಈ ಅರ್ಜುನ್. ಬಸವರಾಜ್ ಮತ್ತು ವಿದ್ಯಾಶ್ರೀ ಇಬ್ಬರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.