ದ್ವಾರಕಾದಲ್ಲಿ 76 ವರ್ಷದ ವೃದ್ಧೆಗೆ ಆಕೆಯ ಮಗ ಕಪಾಳ ಮೋಕ್ಷ ಮಾಡಿದ್ದು, ಆಕೆ ನಿಂತಲ್ಲೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾಳೆ. ಈ ದೃಶ್ಯ ಅಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಆರೋಪಿಯಾದ ರಣ್ಬೀರ್(45)ನನ್ನು ಬಂಧಿಸಲಾಗಿದ್ದು, ಈತ ತನ್ನ ತಾಯಿ ಅವತಾರ್ ಕೌರ್ ಕಪಾಳಕ್ಕೆ ಹೊಡೆದಿದ್ದ. ಇನ್ನು ಇದಕ್ಕೆ ಕಾರಣವೇನು ಅಂತಾ ನೋಡೋದಾದ್ರೆ, ಈ ಘಟನೆ ನಡೆಯುವ ಮುನ್ನ ವೃದ್ಧೆ ಮತ್ತು ಅಕ್ಕ ಪಕ್ಕದ ಮನೆಯವರ ನಡುವೆ ಗಾಡಿ ಪಾರ್ಕ್ ಮಾಡುವ ವಿಷಯಕ್ಕೆ ಜಗಳ ನಡೆದಿತ್ತು.

ಈ ಜಗಳದಲ್ಲಿ ವೃದ್ಧೆ ಮತ್ತು ಅಕ್ಕಪಕ್ಕದ ಮನೆಯವರು ಕೈ ಕೈ ಮಿಲಾಯಿಸಿದ್ದರು. ಆದ್ರೆ ಆ ವೇಳೆ ಮಗ ಬಂದು ಆ ಜಗಳವನ್ನು ನಿಲ್ಲಿಸಿ, ಪಕ್ಕದ ಮನೆಯವರನ್ನು ಮನೆಗೆ ಕಳುಹಿಸಿದ್ದ. ತದನಂತರ ಮಗ-ಸೊಸೆ ಮತ್ತು ವೃದ್ಧೆ ನಡುವೆ ಜಗಳವಾಗಿ ಮಗ ಸಿಟ್ಟಿನಲ್ಲಿ ವೃದ್ಧೆಗೆ ಹೊಡೆದಿದ್ದಾನೆ. ಈ ವೇಳೆ ವೃದ್ಧೆ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಕೆಯ ಪ್ರಾಣ ಪಕ್ಷಿ ಅಷ್ಟರಲ್ಲಿ ಹಾರಿ ಹೋಗಿತ್ತು.

ಇನ್ನು ರಣ್ಬೀರ್ ನಿರುದ್ಯೋಗಿಯಾಗಿದ್ದು, ಕೌಟುಂಬಿಕ ಕಲಹದಿಂದಲೂ ರೋಸಿ ಹೋಗಿದ್ದು, ಸಿಟ್ಟಿನಲ್ಲಿ ಈ ಕೃತ್ಯ ಎಸಗಿದ್ದಾರೆಂದು ಹೇಳಲಾಗಿದೆ. ಈ ವಿಚಾರವಾಗಿ ಬಿಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ರಣ್ಬೀರ್ನನ್ನು ಬಂಧಿಸಲಾಗಿದೆ.




