www.karnatakatv.net : ಕೊರೊನಾ ಆತಂಕದ ನಡುವೆಯೂ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಮಂಗಳೂರು ಪೊಲೀಸರು ಮಾತ್ರ ಇಂದು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಖಾಕಿಯೊಳಗಿರುವ ಪ್ರತಿಭಾವಂತರಿಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ವಿಶೇಷ ವೇದಿಕೆ ಒದಗಿಸಿಕೊಟ್ಟಿದ್ದು, ಫೇಸ್ಬುಕ್ನಲ್ಲಿ ಹಾಡುಗಳ ಮೂಲಕವೇ ಪ್ರಸಿದ್ಧಿಯಾಗಿರುವ ಅರವಿಂದ್ ವಿವೇಕ್ ಅವರ ಪೇಜ್ನಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸರು ಮನ ಬಿಚ್ಚಿ ಹಾಡಿ ರಿಲ್ಯಾಕ್ಸ್ ಆಗಿದ್ದು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರೂ ಕೂಡ ಖುದ್ದು ಹಾಡು ಹಾಡಿ ಸಂಭ್ರಮಿಸಿದರು.

ಕಮಿಷನರೇಟ್ ವ್ಯಾಪ್ತಿಯ ಸುಮಾರು 30ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಈ ಫೇಸ್ಬುಕ್ ಪೇಜ್ನಲ್ಲಿ ಹಾಡಿ ಪ್ರತಿಭಾ ಪ್ರದರ್ಶನ ಮಾಡಿದ್ದಾರೆ. ಕನ್ನಡ, ಹಿಂದಿ ಚಿತ್ರ ಗೀತೆಗಳು ಸೇರಿದಂತೆ ಭಾವಗೀತೆಗಳನ್ನು ಹಾಡಿ ಪೊಲೀಸರು ಖುಷಿಪಟ್ಟರು. ಕಳೆದ ಬಾರಿಯ ಲಾಕ್ಡೌನ್ ಸಮಯದಲ್ಲಿ ವಿವೇಕಾನಂದ ಎಂಬ ಯುವ ಹಾಡುಗಾರ ಈ ಪೇಜ್ ತೆರೆದಿದ್ದು, ಸ್ಥಳೀಯ ಗಾಯಕರಿಗೆ ತನ್ನ ಪೇಜ್ನಲ್ಲಿ ಲೈವ್ ಮೂಲಕ ಅವಕಾಶ ಮಾಡಿಕೊಟ್ಟಿದ್ದರು. ಈ ಪೇಜ್ಗೆ 3 ಲಕ್ಷಕ್ಕೂ ಹೆಚ್ಚು ಜನ ಫಾಲೋವರ್ ಇದ್ದು, ಪ್ರತಿ ವಾರ ಕರ್ಯಕ್ರಮ ನಡೆಸಿಕೊಟ್ಟು ಜನ ಮೆಚ್ಚುಗೆ ಗಳಿಸಿದ್ದರು. ಪೊಲೀಸರಿಗಾಗಿಯೇ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನ ಅಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಿತು.





