www.karnatakatv.net: ಬೆಂಗಳೂರು : ಕಳೆದ ಎರಡು, ಮೂರು ತಿಂಗಳಿಂದ ಐದಾರು ಕಡೆಗಳಲ್ಲಿ ನಾನು ಹಾಗೂ ಸಿದ್ದರಾಮಯ್ಯ ಅವರು ಆಹಾರ ಕಿಟ್ ಹಂಚಿಕೊಂಡು ಬಂದಿದ್ದೇವೆ. ಪದ್ಮಾವತಿ ಅವರು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಸತತ ಮೂರು ತಿಂಗಳಿಂದ ಊಟ, ಆಹಾರ ಕಿಟ್ ಹಂಚುತ್ತಾ ಬಂದಿದ್ದಾರೆ. ಇಂದು 5 ಸಾವಿರ ಜನಕ್ಕೆ ಆಹಾರ ಕಿಟ್ ನೀಡುತ್ತಿದ್ದಾರೆ. ಪದ್ಮಾವತಿ ಅವರು ಮಂತ್ರಿಯಲ್ಲ, ಶಾಸಕಿಯಲ್ಲ. ಅವರ ಬಳಿ ಯಾವುದೇ ಅಧಿಕಾರವಿಲ್ಲ ಆದರೂ ನಿಮ್ಮ ಸೇವೆಗೆ ಸದಾ ಸಿದ್ಧರಿದ್ದಾರೆ. ಅವರು ಸಾಮಾನ್ಯ ಜನರಂತೆ ಬದುಕುತ್ತಿದ್ದಾರೆ. ರಾಜಾಜಿನಗರ ಕ್ಷೇತ್ರದ ಜನರಿಗೆ ಸಹಾಯ ಮಾಡಬೇಕು ಎಂದು ತೀರ್ಮಾನಿಸಿ ಇಂದು ಈ ಕಾರ್ಯಕ್ರಮ ಮಾಡುತ್ತಿದ್ದಾರೆ.
ಈ ಕೋವಿಡ್ ಮಹಾಮಾರಿಯನ್ನು ನಾವು ತಂದಿದ್ದಲ್ಲ. ವಿದೇಶದಿಂದ ಬರುತ್ತಿದ್ದ ಸೋಂಕನ್ನು ಬಿಜೆಪಿ ಸರ್ಕಾರ ನಿಲ್ಲಿಸಬಹುದಿತ್ತು. ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. 1 ಕೋಟಿ ಜನ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. 4 ಕೋಟಿ ಉದ್ಯೋಗ ಕಳೆದುಕೊಂಡಿದ್ದಾರೆ. ಬಾಡಿಗೆ, ಅಂಗಡಿ, ವ್ಯಾಪಾರ, ಕೂಲಿ ಇಲ್ಲವಾಗಿದೆ. ರೈತನ ಬೆಳೆಗೆ ಬೆಲೆ ಸಿಗಲಿಲ್ಲ. ಪ್ರಧಾನಿ ಮೋದಿ ಅವರು ನಿಮ್ಮ ಕೈಯಲ್ಲಿ ದೀಪ ಹಚ್ಚಿಸಿದರು, ಚಪ್ಪಾಳೆ, ಜಾಗಟೆ ಬಾರಿಸಲು ಹೇಳಿದರು. ಚುನಾವಣೆಗೂ ಮುನ್ನ ಅಚ್ಛೇ ದಿನ ಬರುತ್ತದೆ ಎಂದರು. ಜನರನ್ನು ಬೀದಿಯಲ್ಲಿ ನಿಲ್ಲಿಸಿರುವುದೇ ಅಚ್ಛೇ ದಿನವಾ..?! ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏನಾಯ್ತು? ಎಲ್ಲವೂ ಹೆಚ್ಚಾಯ್ತು. ಜನರಿಗೆ ಯಾವುದೇ ನೆರವಿಲ್ಲ.
ಬೀದಿ ವ್ಯಾಪಾರಿ, ಚಾಲಕರು, ಅಸಂಘಟಿತ ಕಾರ್ಮಿಕರಿಗೆ ಹಣ ಕೊಡಿ ಎಂದು ಹೋರಾಟ ಮಾಡಿದೆವು. ನಮ್ಮ ಒತ್ತಡಕ್ಕೆ 2, 3 ಹಾಗೂ 5 ಸಾವಿರ ರೂ. ಘೋಷಿಸಿದರು. ಯಾರಿಗಾದರೂ ಪರಿಹಾರ ಬಂದಿದ್ಯಾ..? ಯಾರಿಗೂ ಬಂದಿಲ್ಲ. ಇದು ಸುರೇಶ್ ಕುಮಾರ್, ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರಿಗೆ ಗೊತ್ತಾಗಬೇಕು. ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಪಕೋಡ ಮಾರಲು ಹೇಳಿದರು. ಜನರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ, ಹಾಸಿಗೆ, ಆಕ್ಸಿಜನ್ ಕೊಡಲು ಆಗಲಿಲ್ಲ. ಈ ಸರ್ಕಾರ ಯಾಕಿರಬೇಕು? ನಾನು, ಸಿದ್ದರಾಮಯ್ಯ ಹಾಗೂ ಇತರೆ ನಾಯಕರು ಇಡೀ ರಾಜ್ಯದುದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದು, ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ಜನ ಕಾಯುತ್ತಿದ್ದಾರೆ.
ಸುರೇಶ್ ಕುಮಾರ್ ಅವರ ಮೇಲೆ ನಾನು ಬಹಳ ವಿಶ್ವಾಸ ಇಟ್ಟಿದ್ದೆ. ಚಾಮರಾಜನಗರ ಜನರಿಗೆ ಸಹಾಯ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 36 ಜನ ಸತ್ತರೂ ಒಬ್ಬರ ಮನೆಗೂ ಹೋಗಲಿಲ್ಲ. ಯಾರಿಗೂ ನೆರವಾಗಲಿಲ್ಲ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆಕ್ಸಿಜನ್ ಕೊರತೆಯಿಂದ ಒಬ್ಬರೂ ಸತ್ತಿಲ್ಲ ಎಂದು ಹೇಳುತ್ತಾರೆ. ನಾನು ಮನೆ ಮನೆಗೂ ಹೋಗಿ ಪ್ರತಿ ಮನೆಗೂ 1 ಲಕ್ಷ ನೆರವು ನೀಡಿ ಬಂದೆ.
ಪದ್ಮಾವತಿ ಅವರು ಇಂದು ಈ ಕಾರ್ಯಕ್ರಮ ಯಾಕೆ ಮಾಡುತ್ತಿದ್ದಾರೆ? ಇದರಿಂದ ನಿಮ್ಮ ಹೊಟ್ಟೆ ತುಂಬುತ್ತದೆ ಎಂಬುದಕ್ಕಿಂತ ನಿಮ್ಮ ಋಣ ತೀರಿಸಲು ಈ ಕಾರ್ಯಕ್ರಮ ಮಾಡುತ್ತಿದ್ದಾರೆ. ತಾವು, ತಮ್ಮ ಮನೆಯವರು ದುಡಿದ ದುಡ್ಡಲ್ಲಿ ನಿಮಗೆ ನೆರವಾಗುತ್ತಿದ್ದಾರೆ.
ಪದ್ಮಾವತಿ ಅವರ ಜತೆ ಇಡೀ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ನೀವು ಕೂಡ ಅವರ ಬೆಂಬಲಕ್ಕೆ ನಿಲ್ಲಬೇಕು. ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಎಲ್ಲ ವರ್ಗದ ಜನರಿಗೆ ಕಾರ್ಯಕ್ರಮ ರೂಪಿಸಲಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. 15ರಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದು, ನೀವೆಲ್ಲರೂ ಇದನ್ನು ಆಚರಣೆ ಮಾಡಬೇಕು. ರಾಷ್ಟ್ರ ಧ್ವಜ ಹಿಡಿದು ರಸ್ತೆಯಲ್ಲಿ ಮೆರವಣಿಗೆ ಮಾಡಿ.
ನಮ್ಮ ಮುಖಂಡರಾದ ವಿಜಯ್ ಕುಮಾರ್ ಹಾಗೂ ಮಂಜುಳಾ ವಿಜಯ್ ಕುಮಾರ್ ಅವರು ಶಿವನಳ್ಳಿ ವಾರ್ಡ್ ನಲ್ಲಿ 4 ಸಾವಿರ ಜನರಿಗೆ ಆಹಾರ ಕಿಟ್ ನೀಡುತ್ತಿದ್ದಾರೆ. ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜಾಜಿನಗರ ಕ್ಷೇತ್ರದ ಪ್ರತಿ ಗಲ್ಲಿಯೂ ನನಗೆ ಗೊತ್ತಿದೆ. ನಾನು ಮಂತ್ರಿಯಾಗುವವರೆಗೂ ಇಲ್ಲೇ ಇದ್ದೆ. ನಂತರ ಬೇರೆ ಕಡೆ ಹೋಗಿದ್ದೇನೆ, ಆದರೂ ಈ ಕ್ಷೇತ್ರದ ಜೊತೆಗಿನ ಪ್ರೀತಿ, ಸಂಬಂಧ ಬಿಟ್ಟಿಲ್ಲ. ರಾಜಾಜಿನಗರ ಕ್ಷೇತ್ರದ ಬೇರೆ ಬೇರೆ ವಾರ್ಡ್ ಗಳಲ್ಲಿ ಆಹಾರ ಕಿಟ್ ಹಂಚುತ್ತಿದ್ದೇವೆ.
ನಿಮ್ಮ ಕ್ಷೇತ್ರದಲ್ಲಿ ನಮ್ಮ ನಾಯಕರು ಸುಮಾರು 50 ಸಾವಿರ ಜನರಿಗೆ ಸಹಾಯ ಮಾಡಿದ್ದಾರೆ. ಚುನಾವಣೆಯಲ್ಲಿ ಸೋತರೂ, ನಿಮಗೆ ಕಷ್ಟಕಾಲದಲ್ಲಿ ಸಹಾಯ ಮಾಡಲು ಮುಂದಾಗಿದ್ದಾರೆ. ಅಧಿಕಾರದಲ್ಲಿರುವವರು, ಮಂತ್ರಿಯಾಗಿರುವವರು ಈ ಕಾರ್ಯ ಮಾಡಿಲ್ಲ. ನಮ್ಮ ನಾಯಕರು ಸೋತಿದ್ದರೂ ನಿಮ್ಮ ಸೇವೆಯನ್ನು ಮರೆತಿಲ್ಲ. ಇಲ್ಲಿ ಬದಲಾವಣೆ ಆಗಬೇಕು. ಕೊರೋನಾ ತಂದವರು ಯಾರು? ಉದ್ಯೋಗ ಇಲ್ಲ. ನಿಮ್ಮ ವ್ಯಾಪಾರ ಹಾಳಾಯ್ತು. ಇದ್ಯಾವುದಕ್ಕೂ ಸರ್ಕಾರ ಪರಿಹಾರ ನೀಡಿಲ್ಲ.
ಮುಂದೆ ಚುನಾವಣೆ ಬಂದಾಗ ಬಿಜೆಪಿ ಸರ್ಕಾರ ಕಿತ್ತೊಗೆದು ನಮಗೆ ಒಂದು ಅವಕಾಶ ಮಾಡಿಕೊಡಿ. ನಾವು ನಿಮ್ಮ ಸೇವೆ ಮಾಡುತ್ತೇವೆ. ಕಾಂಗ್ರೆಸ್ ಎಲ್ಲ ವರ್ಗದ ಜನರ ಬಗ್ಗೆ ಚಿಂತಿಸುತ್ತಿದೆ. ಬಿಜೆಪಿ ಸರ್ಕಾರದ ಎಲ್ಲ ದುರಾಡಳಿತಕ್ಕೆ ನೀವು ಚುನಾವಣೆಯಲ್ಲಿ ಉತ್ತರ ಕೊಡಬೇಕು. ಬಿಜೆಪಿ ಸರ್ಕಾರ ಕಿತ್ತೊಗೆದು ನಮಗೊಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡುತ್ತೇನೆ.
ಕರ್ನಾಟಕ ಟಿವಿ ಬೆಂಗಳೂರು

