www.karnatakatv.net : ದಾವಣಗೆರೆ :ಈಗಿನ ಕಾಲದ ಮಕ್ಕಳು ತಂದೆ ತಾಯಿಯನ್ನು ಕಾಡಿಸಿ ಪಿಡಿಸಿ ತಮ್ಮ ಹಠವನ್ನು ಸಾಧಿಸುವುದೇ ಹೆಚ್ಚು , ಪಾಪ ಚಿಕ್ಕ ಮಕ್ಕಳು ಎಂದು ಪೋಷಕರು ಕೂಡಾ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಈಗಿನ ಮಕ್ಕಳಿಗೆ ಓದುವ ಹವ್ಯಾಸವು ಬಿಟ್ಟು ಆಟವನ್ನು ಆಡುವುದೇ ಹೆಚ್ಚಾಗಿದೆ, ಆದರೆ ಇಲ್ಲಿ ಈ ಪುಟ್ಟ ಪೋರನ ಸಾಧನೆಯನ್ನು ನೋಡಿದರೆ ಎಂತವರೇ ಬಾಯಿಯ ಮೇಲೆ ಕೈ ಇಟ್ಟುಕೋಳ್ಳುವುದು ನಿಜ “ ಮೂರು ದಾಖಲೆಗಳ ಸರದಾರ ಎರಡರ ಹರೆಯದ ಈ ಪುಟ್ಟ ಪೋರ “ ಎಂದೇ ಪ್ರಸಿದ್ಧ ಪಡೆದ ಈ ಬಾಲಕನ ಹೆಸರು ಮೌರ್ಯವರ್ಧನ ಡಾ. ಗಾಯತ್ರಿ ಹಾಗೂ ಡಾ. ಜೈಪ್ರಕಾಶ ದಂಪತಿಯ ಮಗನಾದ ಮೌರ್ಯವರ್ಧನ ಚದುರಂಗಕ್ಕೆ ಸಂಬಂಧಿಸಿದ ವಿಷಯದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ನಿರ್ಮಿಸಿದ್ದಾನೆ.
ಇವನು ತನ್ನ 2 ವರ್ಷ 26 ದಿನಗಳ ವಯಸ್ಸಿಗೆ ಚೆಸ್ ಬೋರ್ಡ್ ಮೇಲೆ ಎಲ್ಲಾ 32 ಚೆಸ್ ಕಾಯಿನ್ ಗಳನ್ನು 1 ನಿಮಿಷ 47 ಸೆಕೆಂಡ್ ಗಳಲ್ಲಿ ಸಮರ್ಪಕ ಹಾಗೂ ವೇಗವಾಗಿ ಜೋಡಿಸಿದ್ದಾನೆ. ಇದರಿಂದಾಗಿ ಇವನು ಚೆಸ್ ಬೋರ್ಡ್ ನ ಮೇಲೆ ಚೆಸ್ ಕಾಯಿನ್ ಗಳನ್ನು ಸಮರ್ಪಕ ಹಾಗೂ ವೇಗವಾಗಿ ಜೋಡಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂದು ದಾಖಲಿಸಿಕೊಂಡಿದ್ದಾನೆ
ಇವನು ತಮಿಳುನಾಡಿನ 2.7 ವರ್ಷ ವಯಸ್ಸಿನ ಬಾಲಕನ ಹೆಸರಿನಲ್ಲಿದ್ದ ದಾಖಲೆ ಮುರಿದು ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದ್ದಾನೆ. ಇವನ ಈ ಸಾಧನೆಯನ್ನು ಪರಿಗಣಿಸಿ ಇಂಡಿಯಾ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಇವನಿಗೆ ಪದಕ, ಸರ್ಟಿಫಿಕೇಟ್, ಗುರುತಿನ ಕಾರ್ಡ್, ರೆಕಾರ್ಡ್ಸ್ ಪುಸ್ತಕ ಹಾಗೂ ಇನ್ನಿತರ ವಸ್ತುಗಳನ್ನು ನೀಡಿ ಗೌರವಿಸಿದ್ದಾರೆ. ಇದಲ್ಲದೇ ಈ ಹಿಂದೆ ಇವನು ತನ್ನ 1 ವರ್ಷ 9 ತಿಂಗಳ ವಯಸ್ಸಿಗೆ 20 ವಿವಿಧ ಪ್ರಕಾರಗಳಲ್ಲಿ 594 ಚಿತ್ರಗಳನ್ನು ಗುರುತಿಸಿ ʼಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ʼನ ವಿಭಾಗದಲ್ಲಿ ಸೇರ್ಪಡೆಗೊಂಡು ಅತ್ಯಂತ ಕಿರಿಯ ವಯಸ್ಸಿನಲ್ಲೇ ಸಾಧನೆ ಮಾಡಿ ಖ್ಯಾತಿ ಹೊಂದಿದ್ದನು. ಹೀಗೆ ತನ್ನ 2 ವರ್ಷ ವಯಸ್ಸಿಗೆ ಇವನು ಎರಡು ರಾಷ್ಟ್ರೀಯ ಮಟ್ಟದ ಹಾಗೂ ಒಂದು ಏಷ್ಯಾ ಮಟ್ಟದ ದಾಖಲೆ ನಿರ್ಮಿಸಿ ದೇಶಕ್ಕೆ ಕೀರ್ತಿಯನ್ನು ತಂದಿದ್ದಾನೆ. ಮೂಲತಃ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕು, ಆಲೂರು ಗ್ರಾಮದವರಾದ ಇವನ ಕುಟುಂಬ ಉದ್ಯೋಗದ ನಿಮಿತ್ತ ಪ್ರಸ್ತುತ ಜಮಖಂಡಿಯ ಮೈಗೂರು ಕಾಲೋನಿಯ ತಾತ್ಕಾಲಿಕ ನಿವಾಸಿಗಳಾಗಿದ್ದಾರೆ.
ಕರ್ನಾಟಕ ಟಿವಿ ದಾವಣಗೆರೆ



