www.karnatakatv.net : ತುಮಕೂರು: ಸಾರ್ ನಮ್ಮೂರಿನ ಪಿಡಿಓ ಸರಿಯಾಗಿ ಕೆಲಸ ಮಾಡ್ತಾ ಇಲ್ಲ. ಅಭಿವೃದ್ಧಿ ಕಾರ್ಯಗಳು ಸರಿಯಾಗಿ ನಡೀತಾ ಇಲ್ಲ. ಪಿಡಿಓ ಅವರನ್ನ ವರ್ಗಾವಣೆ ಮಾಡಿ ಇಲ್ಲವೇ ಅಮಾನತ್ತು ಮಾಡಿ ಅಂತಾ ಗ್ರಾಮ ಪಂಚಾಯ್ತಿ ಸದಸ್ಯರು ದೂರಿದ್ರು. ಸಚಿವ ಕೆ.ಎಸ್.ಈಶ್ವರಪ್ಪ ಕರ್ತವ್ಯ ಲೋಪದ ಪಿಡಿಓ ಅಮಾನತ್ತಿಗೆ ಆದೇಶ ನೀಡಿದರು. ಸಚಿವರೇ ಆದೇಶ ನೀಡಿ ಹಲವು ದಿನಗಳು ಕಳೆದ್ರೂ ಯಾವುದೇ ಕ್ರಮ ಆಗಿಲ್ಲ, ಇದ್ರಿಂದ ಆಕ್ರೋಶಗೊಂಡ ಸದಸ್ಯರು ಹೋರಾಟದ ಹಾದಿ ಹಿಡಿದಿದ್ದಾರೆ.
ಹೀಗೆ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಗ್ರಾ.ಪಂ ಮುಂದೆ ಪ್ರತಿಭಟನೆ ನಡೆಸುತ್ತಿರೋ ಇವರೆಲ್ಲರ ಬೇಡಿಕೆ ಒಂದೇ ಅದು ಪಿಡಿಓ ಅಮಾನತ್ತು ಅಥವಾ ವರ್ಗಾವಣೆ. ಇದು ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಚಂದ್ರಗಿರಿ ಗ್ರಾಮ ಪಂಚಾಯ್ತಿ ಜನರ ಆಗ್ರಹ. ಇಲ್ಲಿನ ಗ್ರಾಮ ಪಂಚಾಯ್ತಿ ಪಿಡಿಓ ಸಂತೋಷ್ ಸಿಂಗ್ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ವರ್ಷದಿಂದ ನರೇಗಾ ಯೋಜನೆ ಯಡಿ ಕೆಲಸ ಮಾಡಿದ ಕಾಮಗಾರಿಗಳ ಬಿಲ್ ಮಾಡಿಲ್ಲ. ಸಮಯಕ್ಕೆ ಕಚೇರಿಗೂ ಬರೋದಿಲ್ಲ.. ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹೆಚ್ಚಾಗಿದೆ. ಇದು ಗ್ರಾಮಸ್ಥರನ್ನ ಕೆರಳುವಂತೆ ಮಾಡಿದೆ. ಇದರ ಬಗ್ಗೆ ಸದಸ್ಯರು ಪ್ರಶ್ತಿಸಿದರೆ ಉಡಾಫೆ ಉತ್ತರ ಕೊಡ್ತಾರಂತೆ. ಪ್ರತಿಯೊಂದಕ್ಕೂ ಹಣದ ಬೇಡಿಕೆಯಿಕೆ ಇಟ್ಟು ಜನರಿಂದ ಹಣ ವಸೂಲಿಗೆ ಇಳಿದಿದ್ದಾರೆ ಅನ್ನೋದು ಪಿಡಿಓ ಸಂತೋಷ್ ಸಿಂಗ್ ವಿರುದ್ಧದ ಆರೋಪಗಳು. ಇದೇ ಕಾರಣದಿಂದ ಸಂಬಂಧಪಟ್ಟ ಪಿಡಿಓ ವಿರುದ್ಧ ಕ್ರಮಕ್ಕೆ ಪ್ರತಿಭಟನೆಗೆ ಇಳಿದಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಇತ್ತಿಚೆ ತುಮಕೂರಿನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಪಿಡಿಓ ಸಂತೋಷ್ ಸಿಂಗ್ ರವರ ಬಗ್ಗೆ ಗ್ರಾ.ಪಂ ಅಧ್ಯಕ್ಷರು ಮತ್ತು ಸದಸ್ಯರು ದೂರು ನೀಡಿದ್ದರು. ಸಚಿವರು ಪಿಡಿಓರವರನ್ನು ಕರೆಯಿರಿ ಎಂದು ಸೂಚಿಸಿದಾಗ ಪಿಡಿಓ ಸಭೆಯಲ್ಲಿ ಇರಲಿಲ್ಲ ಇದರಿಂದ ಕೋಪಗೊಂಡ ಪಿಡಿಓ ರ ರನ್ನು ತಕ್ಷಣ ಅಮಾನತ್ತು ಮಾಡಲು ಸೂಚಿಸಿದ್ದರು. ಆದರೆ ಇಲ್ಲಿಯವರೆಗೂ ಅವರ ಆದೇಶ ಕಾರ್ಯಗತವಾಗಿಲ್ಲದಿರುವುದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಸರ್ಕಾರದ ಭಾಗವಾಗಿರುವ ಮಂತ್ರಿಗಳ ಮಾತಿಗೇ ಕಿಮ್ಮತ್ತಿಲ್ಲ ಎಂದರೆ ಏನರ್ಥ. ಅವರ ಮಾತಿಗೆ ಗೌರವ ಸಿಗಬೇಕೆಂದರೆ ಪಿಡಿಓರವರನ್ನು ತಕ್ಷಣ ಅಮಾನತು ಮಾಡಬೇಕು. ಗ್ರಾ.ಪಂ ನಲ್ಲಿ 14 ಜನ ಸದಸ್ಯರಿದ್ದು, ಪಿಡಿಓ ಸಂತೋಷ್ ಸಿಂಗ್ ರವರನ್ನು ಇಲ್ಲಿಂದ ವರ್ಗಾವಣೆ ಅಥವಾ ಅಮಾನತು ಮಾಡುವವರೆಗೂ 12 ಜನ ಗ್ರಾ.ಪಂ ಸದಸ್ಯರು ಪಂಚಾಯ್ತಿಯ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಯಾವುದೇ ಸಭೆ ನಡೆಸುವುದಿಲ್ಲ ಮತ್ತು ಯಾವುದೇ ಚೆಕ್ ಪಾಸ್ ಮಾಡುವುದಿಲ್ಲ ಜೊತೆಗೆ ಪಂಚಾಯ್ತಿಯ ಒಳಗೆ ಕಾಲಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದ ವಿಷಯ ತಿಳಿದು ಸ್ಥಳಕ್ಕೆ ತಾ.ಪಂ ಇಓ ದೊಡ್ಡಸಿದ್ದಯ್ಯ ಬೇಟಿ ನೀಡಿ ಪರಿಶೀಲಿಸಿದ್ರು. ಈ ವೇಳೆ ಗ್ರಾ.ಪಂ ಕಚೇರಿಯ ಮೇಲ್ಬಾಗದಲ್ಲಿ ರಾಷ್ಟ್ರ ಧ್ವಜವನ್ನೇ ಹಾರಿಸಿರಲಿಲ್ಲ. ಇದನ್ನು ಇಓ ಗಮನಕ್ಕೆ ತಂದ ಸದಸ್ಯರು ಪಿಡಿಓ ಬೇಜವಾಬ್ದಾರಿತನಕ್ಕೆ ಇನ್ನೆಷ್ಟು ಉದಾರಹಣೆ ನೀಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟ ಗ್ರಾ.ಪಂ ಸದಸ್ಯರು ಮತ್ತು ಗ್ರಾಮಸ್ಥರು, ನಿಗದಿತ ಗಡುವಿನೊಳಗೆ ಸಮಸ್ಯೆ ಬಗೆ ಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ –ತುಮಕೂರು