www.karnatakatv.net :ಗುಂಡ್ಲುಪೇಟೆ :ಸರ್ಕಾರಿ ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್ ಕೇಂದ್ರ ಸಿಬ್ಬಂದಿಗಳಿಗೆ ಸರ್ಕಾರದಿಂದ ವೇತನ ಪಿ.ಎಫ್ ಹಣ ಬಂದಿಲ್ಲ ಅಂತ ಸಿಬ್ಬಂದಿಗಳು ಸಾಂಕೇತಿಕವಾಗಿ ಮುಷ್ಕರ ಆರಂಭಿಸಿದ್ದರಿಂದ ಡಯಾಲಿಸಿಸ್ ರೋಗಿಗಳು ಚಿಕಿತ್ಸೆಗಾಗಿ ಪರದಾಟ ಪಡುವಂತಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಸಿಗದೆ ರೋಗಿಗಳು ಪರದಾಡುವಂತ ಪರಿಸ್ಥಿತಿ ಬಂದಿದೆ. ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಸೆ.1 ರಂದು ಡಯಾಲಿಸಿಸ್ ಸಿಬ್ಬಂದಿಗಳು ಮುಷ್ಕರ ಕೈಗೊಂಡಿದ್ದ ಪರಿಣಾಮ ಡಯಾಲಿಸಿಸ್ ಕೆಂದ್ರ ಒಂದೆರಡು ದಿನ ಬಂದ್ ಆಗಿತ್ತು.
ಡಯಾಲಿಸಿಸ್ ಘಟಕದ ಸಿಬ್ಬಂದಿಗಳ ಮುಷ್ಕರ ರೋಗಿಗಳನ್ನು ಪರದಾಡುವಂತ ಪರಿಸ್ಥಿತಿಗೆ ನೂಕಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಮತ್ತು ತಾಲೂಕು ಡಯಾಲಿಸಿಸ್ ಸಿಬ್ಬಂದಿಗಳು ಮುಷ್ಕರವನ್ನ ಕೈಗೊಂಡಿದ್ದರು. ಸರ್ಕಾರವು ಡಯಾಲಿಸಿಸ್ ಸೇವೆಯ ಜವಬ್ದಾರಿಯನ್ನ 2017 ರಲ್ಲೇ ಖಾಸಗಿ ಸಂಸ್ಥೆಯಾದ ಬಿ.ಆರ್.ಎಸ್. ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆಗೆ ವಹಿಸಿಕೊಟ್ಟು ನಿರಾಳವಾಗಿತ್ತು.
ರಾಜ್ಯಾದ್ಯಂತ 23 ಜಿಲ್ಲೆಗಳ 122 ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಸೇವೆಯನ್ನು ನೀಡಲು ಸೂಚನೆ ನೀಡಲಾಗಿತ್ತು. ಆದರೆ 2021 ಮೇ ತಿಂಗಳಿಂದ ಇಲ್ಲಿಯವರೆಗೆ ವೇತನ ಪಾವತಿ ಮಾಡಿಲ್ಲ ಎಂದು ಸಿಬ್ಬಂದಿಗಳು ಮುಷ್ಕರಕ್ಕಿಳಿದ್ದಾರೆ.
ನೌಕರರ ಭವಿಷ್ಯನಿದಿ ಹಣವನ್ನು ಸಹ ನವೆಂಬರ್ 2020 ರಿಂದಲೂ ಪಾವತಿ ಮಾಡಿಲ್ಲವಾದರೂ ನೌಕರರ ಸಂಭಳದಿಂದ ಕಡಿತಗೊಳಿಸಲಾಗಿದೆ. ಖಾಸಗಿ ಸಂಸ್ಥೆಯವರಲ್ಲಿ ವೇತನ ಕೇಳಿದರೆ ಸರ್ಕಾರದಿಂದ ಹಣ ಬಂದಿಲ್ಲವೆಂಬ ಸಬೂಬು ಹೇಳುವ ಬಿ.ಆರ್.ಎಸ್ ಸಂಸ್ಥೆಯ ಆಡಳಿತ ಮಂಡಳಿಯ ವಿರುದ್ದ ಸಿಬ್ಬಂದಿಗಳು ಮುಷ್ಕರ ನಡೆಸುತ್ತಿದ್ದರು ಡಯಾಲಿಸಿಸ್ ಪಡೆಯುವ ಸಾರ್ವಜನಿಕರು ಪರಿತಪಿಸುವಂತಾಗಿದೆ.
ಬಿ.ಆರ್.ಎಸ್. ಸಂಸ್ಥೆಯವರು ಡಯಾಲಿಸಿಸ್ ಘಟಕಗಳ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ ಎನ್ನಲಾಗುತ್ತಿದ್ದು, ಆಗಸ್ಟ್ 2021 ರಿಂದ ಎನ್. ಆರ್.ಎಚ್.ಎಂ. ಕಾರ್ಯಕ್ರಮದಡಿ ಸರ್ಕಾರವೇ ನಿರ್ವಹಣೆ ಮಾಡುತ್ತಿದೆ ಎಂಬ ಮಾಹಿತಿಯನ್ನು ನೌಕರರಿಗೆ ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.
ಇಷ್ಟೆಲ್ಲಾ ಸಮಸ್ಯೆಗಳಿಗೆ ಸಿಲುಕಿರುವ ಈ ಸಿಬ್ಬಂದಿ ಜಿಲ್ಲಾಧಿಕಾರಿ ಮತ್ತು ಗುಂಡ್ಲುಪೇಟೆ ತಾಲೂಕು ವೈದ್ಯಾಧಿಕಾರಿ ಗಳಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಆತುರದ ನಿರ್ಧಾರದಿಂದ ಜನತೆ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ನೀಡುವ ಡಯಾಲಿಸಿಸ್ ಸಿಬ್ಬಂದಿಗಳಿಗೆ ವೇತನ ಭವಿಷ್ಯ ನಿಧಿ ಸಿಗದೆ ಇರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಸರ್ಕಾರ ಕೂಡಲೇ ಡಯಾಲಿಸಿಸ್ ಸಿಬ್ಬಂದಿಗಳಿಗೆ ಬಿ.ಆರ್.ಎಸ್ ಸಂಸ್ಥೆ ಮೂಲಕ ವೇತನ ಕೊಡಿಸಲು ಅಗತ್ಯ ಕ್ರಮ ವಹಿಸಬೇಕಾಗಿದೆ.
ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ