www.karnatakatv.net :ತಿಪಟೂರು : ಹೇಮಾವತಿ ನಾಲೆಯಿಂದ ತಿಪಟೂರು ತಾಲ್ಲೂಕಿನ ಶಿವರ, ಗೌಡನಕಟ್ಟೆ, ಮಾದಿಹಳ್ಳಿ, ಮತ್ತು ಬೈರನಾಯಕನಹಳ್ಳಿ, ಕೆರೆಗಳಿಗೆ ನೀರು ಹರಿಸಲು ಮತ್ತು ಹೊಸದಾಗಿ ಪೈಪ್ ಲೈನ್ ಅಳವಡಿಸಲು ಭೂಮಿ ಪೂಜೆಯನ್ನು ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ನೆರವೇರಿಸಿದರು.
ಬರೋಬ್ಬರಿ 36.50 ಕೋಟಿ ರೂ ಗಳ ನೀರಾವರಿ ಕಾಮಗಾರಿಗೆ ತಿಪಟೂರು ತಾಲೂಕಿನ ಶಿವರ ಗ್ರಾಮದಲ್ಲಿ ಭೂಮಿಪೂಜೆ ಕಾರ್ಯಕ್ರಮ ನಡೆಯಿತು. ತಾಲ್ಲೂಕಿನ ಶಿವರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರ ರಂಗಾಪುರ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ರವರು ಬಹುದಿನಗಳ ಬೇಡಿಕೆಯಾದ ಶಿವರ ಮತ್ತು ಸುತ್ತಮುತ್ತಲ ಕೆರೆಗಳಿಗೆ ನೀರು ಒದಗಿಸುವ ಸುಮಾರು 36.50ಕೋಟಿ ರೂ ಗಳ ಬೃಹತ್ ಕಾಮಗಾರಿ ಹಮ್ಮಿಕೊಂಡಿದ್ದು ಸುತ್ತಮುತ್ತಲ ಕೆರೆಗಳಿಗೆ ನೀರು ತುಂಬಿಸುವುದರಿಂದ ಅನುಕೂಲವಾಗಲಿದೆ ಮತ್ತು ಅಂತರ್ಜಲವೂ ಹೆಚ್ಚಳವಾಗುವುದು ಎಂದು ತಿಳಿಸಿದರು.
ತಿಪಟೂರು ತಾಲ್ಲೂಕಿನ ಶಿವರ ಗ್ರಾಮದಲ್ಲಿ ನಡೆದ ನೀರಾವರಿ ಉದ್ಘಾಟನೆ ಕಾರ್ಯಕ್ರಮವು ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿದೆ ಹಾಗೂ ಸಚಿವರಾದ ಬಿ.ಸಿ.ನಾಗೇಶ್ ರವರು ಸೌಜನ್ಯಕ್ಕಾದರೂ ಗ್ರಾಮ ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಜನಪ್ರತಿನಿಧಿಗಳನ್ನು ಅವಮಾನಿಸಿದ್ದಾರೆ ಎಂದು, ಆರೋಪಿಸಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಮೀನಾಕ್ಷಿ,ಉಪಾಧ್ಯಕ್ಷ ತಿಮ್ಮೇಗೌಡ, ಮಾ.ಅಧ್ಯಕ್ಷ ಬಸವರಾಜ್,ಸದಸ್ಯರಾದ ನರಸಿಂಹಮೂರ್ತಿ,ಚಂದ್ರಣ್ಣ ಶಿವರ ಮತ್ತು ಶಶಿಧರ್ ಮತ್ತು ಸೇರಿದಂತೆ ಗ್ರಾಮಸ್ಥರು ಆರೋಪಿಸಿದರು..
ಒಟ್ನಲ್ಲಿ ಒಂದು ಕಡೆ ಅಭಿವೃದ್ದಿ ಕಾರ್ಯಕ್ರಮ ನಡೆದಿದ್ದರೆ, ಮತ್ತೊಂದು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎನ್ನುವ ವಿರೋಧ ವ್ಯಕ್ತವಾಗಿದ್ದು, ಸಾರ್ವಜನಿಕರನ್ನ ಇರಿಸುಮುರಿಸಿಗೆ ದೂಡಿದೆ
ದರ್ಶನ್ ಕೆ.ಡಿ.ಆರ್, ಕರ್ನಾಟ ಟಿವಿ –ತುಮಕೂರು