www.karnatakatv.net :ಹುಬ್ಬಳ್ಳಿ: ವಿಕಲಚೇತನರು ಎಂದಾಕ್ಷಣ ಕೈಲಾಗದವರು ಎಂದರ್ಥವಲ್ಲ. ಅವರಲ್ಲಿಯೂ ವಿಶೇಷ ಸಾಮರ್ಥ್ಯವಿರುತ್ತದೆ. ಈ ಮಾತನ್ನು ಅಕ್ಷರಶಃ ನಿರೂಪಿಸಿದ್ದಾರೆ.
ಹೌದು.. ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿನ ಶ್ರೀ ಬಸವೇಶ್ವರ ಅಂಧ ಮತ್ತು ಅಂಗವಿಕಲರ ಸಂಸ್ಥೆ ಕಳೆದ ಎರಡು ವರ್ಷಗಳಿಂದ ಅಂಗವಿಕಲರ, ನಿರಾಶ್ರಿತರ, ಮಹಿಳೆಯರ, ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದ್ದು, ನಾಡಿನಲ್ಲಿ ಭಿಕ್ಷಾಟನೆ, ನಿರುದ್ಯೋಗ ನಿರ್ಮೂಲನೆ, ಶಿಕ್ಷಣ ಆರ್ಥಿಕ ಸಮತೋಲನ ಕಾಪಾಡಿಕೊಳ್ಳಬೇಕೆಂಬ ದೃಷ್ಟಿಯಿಂದ ನಿರಂತರವಾಗಿ ಶ್ರಮಿಸುತ್ತಿದೆ. ಅದರಂತೆ ಅಂಧ ಮತ್ತು ಅಂಗವಿಕಲರಿಗೆ ಸಾಹಿತ್ಯ, ಸಂಗೀತ ಸೇರಿದಂತೆ ಇನ್ನಿತರ ಕಲೆಗಳನ್ನು ಕಲಿಸಿ ಅವರು ಕೂಡಾ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡುತ್ತಿದ್ದಾರೆ.
ಇಂದು ಸಂಸ್ಥೆಯ ಅಡಿಯಲ್ಲಿನ ಅಂಧ ಕಲಾವಿದರ ಸಂಗೀತ ತಂಡವೊಂದು ಹುಬ್ಬಳ್ಳಿಗೆ ಆಗಮಿಸಿತು. ಈ ವೇಳೆ ಗುಲ್ಬರ್ಗಾ ಮೂಲದ ದೇವೆಂದ್ರ, ಉಮಾದೇವಿ ಅವರು ಇಲ್ಲಿನ ಹಳೇ ಕೋರ್ಟ್ ವೃತ್ತದ ಬಳಿ ಸಂಗೀತ ಕಾರ್ಯಕ್ರಮ ನಡೆಸಿ ಕನ್ನಡ ಸಿನಿಮಾಗಳ ಹಾಡನ್ನು ಹಾಡಿ ಜನರ ಮನಸ್ಸನ್ನು ಸೆಳೆದರು. ಇನ್ನೂ ಈ ಕಲಾವಿದರು ಮದುವೆ ಸಮಾರಂಭ, ಹುಟ್ಟುಹಬ್ಬ ಜಾತ್ರೆ ಹಾಗೂ ಹಬ್ಬದ ದಿನಗಳಲ್ಲಿ ಶುಭ ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿ ಕೊಡುತ್ತಾರೆ.
ಒಟ್ಟಿನಲ್ಲಿ ಕೈಕಾಲುಗಳು ಸರಿಯಾಗಿ ಇದ್ದು, ದುಡಿದು ತಿನ್ನದೇ ಸೋಮಾರಿಗಳಾಗುತ್ತಿರುವ ಸನ್ನಿವೇಶದಲ್ಲಿ ಈ ವಿಕಲಾಂಗರು ವಿಶಿಷ್ಠವಾಗಿ ನಿಲ್ಲುತ್ತಾರೆ.
ಕರ್ನಾಟಕ ಟಿವಿ- ಹುಬ್ಬಳ್ಳಿ

