www.karnatakatv.net :ಕೋವಿಡ್ ನಿಂದ ಚೇತರಿಸಿಕೊಂಡವರಲ್ಲಿ ಕ್ಷಯ ರೋಗ ಹೆಚ್ಚಾಗುತ್ತಿರೋ ಆತಂಕಕಾರಿ ವಿಚಾರ ಬಹಿರಂಗವಾಗಿದೆ.
ಹೌದು, ಕೋವಿಡ್ ಸೋಂಕಿನಿಂದ ಬಳಲಿ ಬೆಂಡಾಗಿ ನಾನಾ ಕಸರತ್ತು ಮಾಡಿ ಜೀವ ಉಳಿಸಿಕೊಂಡವರಿಗೀಗ ಮತ್ತೊಂದು ಶಾಕ್ ಎದುರಾಗಿದೆ. ಅದೇನಪ್ಪಾ ಅಂದ್ರೆ, ಕೋವಿಡ್ ನಿಂದ ಗುಣಮುಖರಾದವರಲ್ಲಿ ಇದೀಗ ಕ್ಷಯರೋಗ ಬಾಧೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಒಂದು ತಿಂಗಳ ಕಾಲ ನಡೆದ ಕ್ಷಯ ರೋಗ ಸಮೀಕ್ಷೆಯಲ್ಲಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದ ಮಂದಿಯಲ್ಲಿ ಕ್ಷಯ ರೋಗ ಬಾಧಿಸೋ ಸಾಧ್ಯತೆ ಶೇಕಡಾ 60ರಷ್ಟು ಏರಿಕೆಯಾಗಿದೆ ಅಂತ ತಿಳಿದು ಬಂದಿದೆ. ಹೀಗಾಗಿ ಕೋವಿಡ್ ನಿಂದ ಚೇತರಿಸಿಕೊಂಡವರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಗಸ್ಟ್ 16 ರಿಂದ ಸೆಪ್ಟೆಂಬರ್ 11 ರ ನಡುವೆ ಮನೆ-ಮನೆಗೆ ಸಮೀಕ್ಷೆ ನಡೆಸಿ ಒಟ್ಟು 7,66,137 ಜನರನ್ನು ಪರೀಕ್ಷಿಸಿದೆ. ಈ ಸಮೀಕ್ಷೆ ಪ್ರಕಾರ ಬೆಂಗಳೂರು ನಗರದಲ್ಲಿ 44, ಬಳ್ಳಾರಿಯಲ್ಲಿ 25, ಮೈಸೂರಲ್ಲಿ 14, ಚಿತ್ರದುರ್ಗದಲ್ಲಿ 13, ಕಲಬುರಗಿಯಲ್ಲಿ 13 ಮತ್ತು ಕೊಪ್ಪಳದಲ್ಲಿ 13 ಟಿಬಿ ರೋಗಿಗಳಿದ್ದಾರೆ. ಇನ್ನು ಟಿಬಿ ಕಾಣಿಸಿಕೊಂಡ ಶೇಕಡಾ 60 ರಷ್ಟು ಮಂದಿ ಈ ವರ್ಷದ ಆರಂಭದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು.
ಕೊರೋನಾ ಮತ್ತು ಕ್ಷಯ ರೋಗ ಶ್ವಾಸಕೋಶವನ್ನು ಬಾಧಿಸೋ ಕಾಯಿಲೆಗಳಾಗಿದ್ದು, ಈ ಎರಡೂ ರೋಗಗಳು ಒಂದಕ್ಕೊಂದು ಸಂಬಂಧಿತವಾಗಿವೆ. ಇನ್ನು ಇದಕ್ಕಾಗಿ ಯಾರೂ ಹೆದರೋ ಹಾಗಿಲ್ಲ… ಹಾಗಂತ ಕೋವಿಡ್ ಬಂದು ಹೋದವರಿಗೆಲ್ಲಾ ಕ್ಷಯ ರೋಗ ಬರೋದಿಲ್ಲ. ಮುಂಜಾಗ್ರತಾ ಕ್ರಮವಾಗಿ ಕೋವಿಡ್ ನಿಂದ ಗುಣಮುಖರಾದವರು ಸ್ವಯಂಪ್ರೇರಿತರಾಗಿ ಕ್ಷಯ ತಪಾಸಣೆಗೆ ಮುಂದಾದ್ರೆ ಟಿಬಿ ರೋಗ ಬರದಂತೆ ಎಚ್ಚರವಹಿಸಬಹುದು. ಇದಕ್ಕೆ ಪ್ರತ್ಯೇಕ ಔಷಧಗಳಿದ್ದು ಇವುಗಳ ನೆರವಿನಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.
ಬ್ಯೂರೋ ರಿಪೋರ್ಟ್ , ಕರ್ನಾಟಕ ಟಿವಿ