1.ಹೆಣ್ಣು ಮಕ್ಕಳ ಮೇಲೆ ದ್ವೇಷವೇಕೆ…?
ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳು ಆದಷ್ಟು ಬೇಗ ಶಾಲೆಗೆ ಮರಳಲು ಅವಕಾಶ ನೀಡ್ತೀವಿ ಅಂತ ತಾಲಿಬಾನ್ ಹೊಸ ವರಸೆ ತೆಗೆದಿದೆ. ಕಳೆದ ವಾರ ಶಾಲೆಗಳನ್ನು ಪುನಾರಂಭಿಸಿದ ತಾಲಿಬಾನ್ ಕೇವಲ ಪುರುಷ ಶಿಕ್ಷಕರು ಮತ್ತು ಬಾಲಕರಿಗೆ ಮಾತ್ರ ಶಾಲೆಗೆ ಪ್ರವೇಶಾತಿ ಅವಕಾಸ ಕಲ್ಪಿಸಿತ್ತು. ಆದ್ರೆ ಮಹಿಳಾ ವ್ಯವಹಾರಗಳ ಸಚಿವಾಲಯವನ್ನೇ ಬಂದ್ ಮಾಡಿರುವ ಬಗ್ಗೆ ತಾಲಿಬಾನ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದೆ.
2. ಪಾಕ್ ಗೆ ಛೀಮಾರಿ
ಪಾಕಿಸ್ತಾನದಲ್ಲಿ ಉರ್ದು ಭಾಷೆಯನ್ನ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಲು ವಿಫಲವಾಗಿದ್ದಕ್ಕೆ ಪಾಕ್ ಸುಪ್ರೀಂ ಕೋರ್ಟ್ ಪಾಕ್ ಸರ್ಕಾರಕ್ಕೆ ಚೀಮಾರಿ ಹಾಕಿದೆ. ಮಾತೃಭಾಷೆ ಮತ್ತು ರಾಷ್ಟ್ರೀಯ ಭಾಷೆ ಇರದ ಹೊರತು ಯಾವುದೇ ರಾಷ್ಟ್ರ ತನ್ನ ಗುರುತು ಕಳೆದುಕೊಳ್ಳುತ್ತದೆ ಅಂತ ಅಭಿಪ್ರಾಯಪಟ್ಟಿದೆ. ಇನ್ನು 2015ರಲ್ಲಿಯೇ ಪಾಕ್ ಸುಪ್ರೀಂ ಕೋರ್ಟ್ ಉರ್ದುವನ್ನು ಅಧಿಕೃತ ಭಾಷೆಯನ್ನಾಗಿ ಮಾಡಲು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಪಾಕ್ ಸರ್ಕಾರಕ್ಕೆ ನ್ಯಾಯಾಲಯ ಚೀಮಾರಿ ಹಾಕಿದೆ.
3. ಅಮೆರಿಕಾ ಗ್ರೀನ್ ಸಿಗ್ನಲ್
ಅಮೇರಿಕಾ ಪ್ರವಾಸ ಪ್ಲಾನ್ ಮಾಡಿದ್ದವರಿಗೀಗ ಶುಭ ಸುದ್ದಿ ನೀಡಿದೆ. ಕೊರೊನಾದಿಂದಾಗಿ ಅಮೆರಿಕಾ ಪ್ರವೇಶಕ್ಕೆ ವಲಸಿಗರು ಮತ್ತು ಪ್ರವಾಸಿಗರಿಗೆ ಹೇರಿದ್ದ ನಿರ್ಬಂಧವನ್ನು ಸಡಿಲಗೊಳಿಸಲಾಗಿದ್ದು, ಸಂಪೂರ್ಣ ವ್ಯಾಕ್ಸಿನ್ ಪಡೆದಿರುವವರು ಮಾತ್ರ ನವೆಂಬರ್ ತಿಂಗಳಿನಿಂದ ಅವಕಾಶ ಕಲ್ಪಿಸಲಾಗಿದೆ ಅಂತ ವೈಟ್ ಹೌಸ್ ತಿಳಿಸಿದೆ. ಇನ್ನು 2020ರ ಆರಂಭದಲ್ಲಿ ಕೊರೊನಾ ಹಾವಳಿಯಿಂದಾಗಿ ಅಮೇರಿಕಾ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿದೇಶಿ ಪ್ರಯಾಣಿಕರ ಪ್ರವೇಶಕ್ಕೆ ನಿಷೇಧಿಸಿದ್ದರು.
4. ‘ನಿರುದ್ಯೋಗಿಗಳಿಗೆ ಮಾಸಿಕ 3000 ನೆರವು’
2022 ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಸ್ಥಳೀಯರಿಗೆ ಖಾಸಗಿ ಕ್ಷೇತ್ರ ಸೇರಿದಂತೆ ಶೇ .80 ರಷ್ಟು ಉದ್ಯೋಗಗಳನ್ನು ಮೀಸಲಿಡುತ್ತೇವೆ ಅಂತ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಗೋವಾದಲ್ಲಿ ಪ್ರತಿ ಕುಟುಂಬದ ಒಬ್ಬ ನಿರುದ್ಯೋಗಿ ಸದಸ್ಯರಿಗೆ ಸರ್ಕಾರಿ ಉದ್ಯೋಗ ಮತ್ತು ನಿರುದ್ಯೋಗಿ ಯುವಕರಿಗೆ ಕೆಲಸ ಸಿಗೋವರೆಗೂ ಮಾಸಿಕ 3,000 ರೂಪಾಯಿ ನೀಡುತ್ತೇವೆ ಅಂತ ಕೇಜ್ರಿವಾಲ್ ಇದೇ ವೇಳೆ ತಿಳಿಸಿದ್ರು.
5. ಸಾರಿಗೆ ಸಿಬ್ಬಂದಿಗೆ ಗುಡ್ ನ್ಯೂಸ್
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಅಂತ ಒತ್ತಾಯಿಸಿ ಪ್ರತಿಭಟನೆ ನಡೆಸಿ ವಜಾಗೊಂಡಿದ್ದ ಸಾರಿಗೆ ಸಿಬ್ಬಂದಿಗೆ ಸದ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೌದು, ಕಳೆದ ಕೆಲ ತಿಂಗಳ ಹಿಂದೆ ರಾಜ್ಯಾದ್ಯಂತ ಸಾರಿಗೆ ಸಿಬ್ಬಂದಿ ತಮ್ಮ ಕೆಲಸಕ್ಕೆ ಚಕ್ಕರ್ ಹಾಕಿ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದಿದ್ರು. ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ 4200 ಮಂದಿಯನ್ನ ಇಲಾಖೆ ಸೇವೆಯಿಂದ ವಜಾಗೊಳಿಸಿತ್ತು. ಆದ್ರೆ ಇದೀಗ ತನ್ನ ನಿಲುವು ಬದಲಿಸಿರೋ ಸರ್ಕಾರ ವಜಾಗೊಂಡ ನೌಕರರ ಮರು ನೇಮಕಕ್ಕೆ ನಿರ್ಧಾರ ಮಾಡಿದೆ.
6. ಸ್ಯಾಂಡಲ್ ವುಡ್ ಗೆ ಸಿಹಿ ಸುದ್ದಿ
ಸಿನಿಮಾ ಥಿಯೇಟರ್ ಗಳಲ್ಲಿ ಶೇ.100ರಷ್ಟು ಆಸನ ಭರ್ತಿ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇಂದು ಚಿತ್ರ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದ ಆರೋಗ್ಯ ಸಚಿವ ಕೆ.ಸುಧಾಕರ್, ದಸರಾ ಹಬ್ಬಕ್ಕೂ ಮುನ್ನವೇ ಸಿನಿಮಾ ಹಾಲ್ ಗಳ ಸಂಪೂರ್ಣ ಸೀಟು ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಲಿದೆ ಅನ್ನೋ ಸೂಚನೆ ನೀಡಿದ್ದಾರೆ. ಈಗಾಗಲೇ ಸಿಎಂ ಬೊಮ್ಮಾಯಿಯವರೊಂದಿಗೆ ಚರ್ಚಿಸಿದ್ದು 2-3 ದಿನಗಳಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
7. IITಗೆ ಲಗ್ಗೆಯಿಟ್ಟ ಆನೆಗಳ ಹಿಂಡು
ಕೇರಳಾದ ಪಾಲಕ್ಕಾಡ್ ಐಐಟಿಯಲ್ಲಿ ಆನೆಗಳ ಹಿಂಡು ನುಗ್ಗಿ ಆತಂಕ ಸೃಷ್ಟಿ ಮಾಡಿತ್ತು. ಇನ್ನು ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಅಟ್ಟಲು ಇನ್ನಿಲ್ಲದ ಪ್ರಯತ್ನ ನಡೆದಿದೆ. ಇಲ್ಲಿನ ಕಾಂಜಿಕೋಡ್ ಐಐಟಿ ಕ್ಯಾಂಪಸ್ ನಲ್ಲಿ ಇದು ಬೆಳಗ್ಗೆ 16 ಆನೆಗಳ ಹಿಂಡು ಒಮ್ಮೆಲೇ ಲಗ್ಗೆಯಿಟ್ಟಿತ್ತು. ಆನೆಗಳನ್ನು ಕಂಡ ಸ್ಥಳೀಯರು ಅವುಗಳನ್ನು ಕಾಡಿಗಟ್ಟಲು ಪಟಾಕಿ ಸಿಡಿಸಿದ್ರು. ಇದರಿಂದ ಗಾಬರಿಗೊಂಡ ಗಜಪಡೆ ದಿಕ್ಕಾಪಾಲಾಗಿ ಕ್ಯಾಂಪಸ್ ನಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡಗಳ ಬಳಿ ಓಡಿಹೋದವು. ಇದರಿಂದ ಕಟ್ಟಡ ಕಾರ್ಮಿಕರು ಹೆದರಿ ಮರವೇರಿ ಕುಳಿತ್ರು.
8. ಒಂದೇ ಗಿಡದಲ್ಲಿ 839 ಟೊಮ್ಯಾಟೋ…!
ಒಂದೇ ಗಿಡದಲ್ಲಿ ಬರೋಬ್ಬರಿ 839 ಟೊಮ್ಯಾಟೋ ಹಣ್ಣುಗಳನ್ನು ಬೆಳೆದು ಇಂಗ್ಲೆಂಡ್ ನ ವ್ಯಕ್ತಿಯೊಬ್ಬರು ವಿಶ್ವದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ನ ಸ್ಟಾನ್ ಸ್ಟೆಜ್ ಅಬ್ಬೋಟ್ಸ್ ಪ್ರಾಂತ್ಯದ ನಿವಾಸಿ ಡಾಗ್ಲಾಸ್ ಸ್ಮಿತ್ ತನ್ನ ಒಂದು ಗಿಡದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಟೊಮ್ಯಾಟೋ ಬೆಳೆದು ಸುದ್ದಿಯಾಗಿದ್ದಾರೆ. ಈ ಮೂಲಕ ಈ ಹಿಂದೆ ಒಂದೇ ಗಿಡದಲ್ಲಿ 448 ಟೊಮ್ಯಾಟೋ ಬೆಳೆದಿದ್ದ ಇಂಗ್ಲಂಡ್ ನ ಮತ್ತೊಬ್ಬ ವ್ಯಕ್ತಿಯ ದಾಖಲೆಯನ್ನು ಸ್ಮಿತ್ ಮುರಿದಿದ್ದಾರೆ.
9. ‘ಮಾರ್ಟಿನ್’ ಗೆ ಹೊಸ ನಾಯಕಿಯ ಹುಡುಕಾಟ
ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ನಟಿಸ್ತಿರೋ ಮೋಸ್ಟ್ ಎಕ್ಸೆಪೆಕ್ಟಡ್ ಮಾರ್ಟಿನ್ ಸಿನಿಮಾದ ಚಿತ್ರೀಕರಣ ಈಗಾಗಲೇ ನಡೀತಿದೆ. ಚಿತ್ರದಲ್ಲಿ ಜಬರ್ದಸ್ತ್ ಆಗಿ ಕಾಣಿಸಿಕೊಳ್ತಿರೋ ಆಕ್ಷನ್ ಪ್ರಿನ್ಸ್ ಗೆ ಈವರೆಗೂ ನಾಯಕಿಯನ್ನು ಫೈನಲೈಸ್ ಮಾಡದ ಚಿತ್ರತಂಡ ಸದ್ಯ ಹೊಸ ಪ್ರತಿಭೆಯ ಹುಡುಕಾಟದಲ್ಲಿದೆ. ಹೀಗಾಗಿ ಚಿತ್ರತಂಡ ಸದ್ಯ ನಾಯಕಿಯಾಗಿ ನಟಿಸಲು ನಟಿಯರು ಬೇಕು ಅಂತ ಜಾಹಿರಾತು ನೀಡಿದೆ.
10. ಕಿವೀಸ್ ಮಹಿಳಾ ಕ್ರಿಕೆಟ್ ಟೀಂಗೆ ಬೆದರಿಕೆ
ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕಾಗಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ನ ಲೈಸೆಸ್ಟರ್ ಗೆ ಬಂದಿಳಿದಿದ್ದ ಆಟಗಾರರು ಅಭ್ಯಾಸದಲ್ಲೂ ಪಾಲ್ಗೊಂಡಿಲ್ಲ.
ಮೇಲ್ ಮೂಲಕ ಬೆದರಿಕೆ ಬಂದಿದೆಯಾದರೂ ಇದರಲ್ಲಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡವನ್ನೇ ಉಲ್ಲೇಖಿಸಲಾಗಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ.