Tuesday, August 5, 2025

Latest Posts

ವಿವೇಕಾನಂದರು ಉಳಿದಿದ್ದ ನಿರಂಜನ ಮಠವನ್ನು ಉಳಿಸಿ..!

- Advertisement -

www.karnatakatv.net :ಗುಂಡ್ಲುಪೇಟೆ: ಎನ್‌ಟಿಎಂ ಶಾಲೆ ಕೆಡವಿ ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಿಸುವ ಶ್ರೀರಾಮಕೃಷ್ಣ ಆಶ್ರಮದ ನಿರ್ಧಾರಕ್ಕೆ ಇದೀಗ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದ್ದು, ವಿವೇಕಾನಂದರು ಉಳಿದಿದ್ದರು ಎನ್ನಲಾದ ನಿರಂಜನ ಮಠವನ್ನೂ ಉಳಿಸಿ ಸ್ಮಾರಕ ನಿರ್ಮಿಸುವಂತೆ ಒತ್ತಾಯಿಸಿದೆ.

ಮಠದ ಉಳಿವಿಗೆ ಹೋರಾಟದ ಕುರಿತು ಪಟ್ಟಣದ ಸೋಮೇಶ್ವರ  ಕಲಾಮಂದಿರದಲ್ಲಿ ನಡೆದ ಸಭೆಯಲ್ಲಿ ಹೇಳಿಕೆ ನೀಡಿರುವ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಚ್.ಎಸ್.ನಂಜಪ್ಪ ನಿರಂಜನ ಮಠದ ಜಾಗದಲ್ಲಿ ಸ್ಮಾರಕ ನಿರ್ಮಿಸುವ ಸಂಬಂಧ ಶಾಲೆ ಕೆಡವಲು ತಯಾರಿ ನಡೆಸಲಾಗಿದೆ. 2009 ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಮುಂದೆ ಸ್ಮಾರಕ ನಿರ್ಮಿಸುವ ಪ್ರಸ್ತಾಪ ಸಲ್ಲಿಕೆಯಾಯಿತು. ಆಗಲೂ ವೀರಶೈವ ಮಹಾಸಭಾವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ವೀರಶೈವ ಮಹಾಸಭಾವು ಸ್ಮಾರಕದ ವಿರುದ್ಧವಿಲ್ಲ. ಹಾಗೆ ಶಾಲೆಯನ್ನೂ ಉಳಿಸಿ, ವೀರಶೈವ- ಲಿಂಗಾಯತ ಅಸ್ಮಿತೆಯಾಗಿರುವ ನಿರಂಜನ ಮಠವನ್ನೂ ಉಳಿಸುವಂತಾಗಬೇಕು ಎಂದು ಒತ್ತಾಯಿಸುವ ಜೊತೆಗೆ ಅ. 3 ರಂದು ಮಠದ ಉಳಿವಿಗೆ ಹೋರಾಟ ಮಾಡುತ್ತಿರುವ  ಸಮಿತಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ವೀರಶೈವ ಮುಖಂಡ ಕಡಬೂರು ಮಂಜುನಾಥ್ ಮಾತನಾಡಿ, ಶತಮಾನದ ಹಿಂದೆ ಮೈಸೂರಿಗೆ ಬಂದಿದ್ದ ಸ್ವಾಮಿ ವಿವೇಕಾನಂದರು ನಿರಂಜನ ಮಠದಲ್ಲಿ ತಂಗಿದ್ದರು. 12ನೇ ಶತಮಾನದಲ್ಲಿ ಜೀವಿಸಿದ್ದ ಬಸವಣ್ಣನವರ ಅತಿಥಿ ದೇವೋ ಭವ ಎಂಬ ಉಕ್ತಿಯಂತೆ ಮಠ ಆಶ್ರಯ ನೀಡಿತ್ತು. ಅದು ಹೆಮ್ಮೆ ಮತ್ತು ಐತಿಹಾಸಿಕ ಘಟನೆಯೂ ಆಗಿದೆ. ಆ ಜಾಗದಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಿಸುವುದು ಒಳ್ಳೆಯದೆ. ಅದೇ ರೀತಿ ನಿರಂಜನ ಮಠವನ್ನೂ ಉಳಿಸಿ ಸ್ಮಾರಕ ನಿರ್ಮಿಸಲಿ. ವೀರಶೈವರ ಭಾವನೆಗೆ ಧಕ್ಕೆ ತರಬಾರದು ಎಂಬುದಷ್ಟೇ ನಮ್ಮ ಒತ್ತಾಯವಾಗಿದೆ. ನಿರಂಜನ ಮಠದಲ್ಲಿನ ಗದ್ದುಗೆ, ಲಿಂಗ ಪ್ರತಿಷ್ಠಾಪನೆಯಾಗಿದೆ. ಆ ವಿಗ್ರಹಕ್ಕೆ ಈಗಲೂ ಪೂಜೆ ಸಲ್ಲಿಕೆಯಾಗುತ್ತಿದೆ. ಮುಜರಾಯಿ ಇಲಾಖೆಯವರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ದರ್ಶನಾರ್ಥಿಗಳು ಪ್ರತಿ ಶಿವರಾತ್ರಿಯಂದು ಭೇಟಿ ನೀಡುತ್ತಾರೆ ಇದು ನಮ್ಮ ಸಂಸ್ಕೃತಿ ಮತ್ತು ನಂಬಿಕೆಯಾಗಿದೆ ಜೇನು ಗೂಡಿಗೆ ಕಲ್ಲೆಸೆಯುವ ದುಸ್ಸಾಹಸಕ್ಕೆ ಕೈ ಹಾಕದಿರಿ ಎಂದು ಎಚ್ಚರಿಸಿದರು.

ವಿವೇಕಾನಂದ ಸ್ಮಾರಕ ನಿರ್ಮಾಣ ಕಾರ್ಯವು ಎನ್‌ಟಿಎಂ ಶಾಲೆ ಮತ್ತು ನಿರಂಜನ ಮಠವನ್ನು ಒಡೆದು ಪೂರೈಸುವಂತಹದ್ದಲ್ಲ. ಈ ವಿಚಾರದಲ್ಲಿ ಯಾವುದೇ ರಾಜಿ ಇರುವುದಿಲ್ಲ, ಒಂದು ವೇಳೆ ಮಠ, ಶಾಲೆ ನಾಶಪಡಿಸಿ ಸ್ಮಾರಕ ನಿರ್ಸಿಸಿದ್ದಲ್ಲಿ ವೀರಶೈವ- ಲಿಂಗಾಯತ ಸಮುದಾಯದ ಮುಖಂಡರು, ಯುವಜನರು ಹೋರಾಟ ನಡೆಸಬೇಕಾಗುತ್ತದೆ ಎಂದು ಚಾಮರಾಜನಗರ ಜಿಲ್ಲಾ  ವೀರಶೈವ ಮಹಾಸಭಾ ಎಚ್ಚರಿಕೆ ನೀಡಿದೆ.

 ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ

- Advertisement -

Latest Posts

Don't Miss