www.karnatakatv.net: ದೇಶಕ್ಕೆ ದ್ರೋಹ ಎಸಗುವವರಿಗೆ ವಿಶ್ವದ ಯಾವುದೇ ಮೂಲೆಯಲ್ಲೂ ಸುರಕ್ಷಿತ ತಾಣ ಇಲ್ಲದಿರುವಂತೆ ಖಾತರಿಪಡಿಸಿಕೊಳ್ಳಬೇಕು ಅಂತ ಸಿಬಿಐ ಮತ್ತು ಕೇಂದ್ರ ಜಾಗೃತ ಯೋಗದ ಅಧಿಕಾರಿಗಳಿಗೆ ಪ್ರಧಾನಿ ಮೋದಿ ನಿರ್ದೇಶನ ನೀಡಿದ್ದಾರೆ. ಗುಜರಾತ್ ನ ಕೇವಡಿಯಾದಲ್ಲಿ ನಡೆದ ಸಿಬಿಐ ಮತ್ತು ಸಿವಿಸಿ ಜಂಟಿ ಸಮಾವೇಶ ಉದ್ದೇಶಿಸಿ ಆನ್ ಲೈನ್ ಮೂಲಕ ಮಾತನಾಡಿದ ಮೋದಿ, ದೇಶದ ಹಾಗೂ ಜನರ ಹಿತಾಸಕ್ತಿ ವಿರುದ್ಧವಾಗಿ ನಡೆದುಕೊಳ್ಳುವವರು ಎಷ್ಟೇ ಬಲಶಾಲಿಯಾಗಿದ್ರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಹೇಳಿದ್ದಾರೆ.
ದೇಶದ ಬ್ಯಾಂಕ್ ಗಳಿಗೆ ಸಾಲ ಮರುಪಾವತಿಸದೆ ವಿದೇಶಗಳಲ್ಲಿ ಆಶ್ರಯ ಪಡೆದಿರೋ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೌಕ್ಸಿ ವಿರುದ್ಧವೂ ಸರ್ಕಾರ ಕಾನೂನು ಕ್ರಮ ಕೈಗೊಳ್ಳುತ್ತಿರುವ ಸಂದರ್ಭದಲ್ಲೇ ಮೋದಿ ಈ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ.
ನೀವು ಭಾರತಾಂಬೆ ಮತ್ತು ದೇಶದ ಮಣ್ಣಿಗಾಗಿ ಕೆಲಸ ಮಾಡುತ್ತಿದ್ದೀರಿ ಅನ್ನೋದು ನೆನಪಿನಲ್ಲಿರಲಿ. ನಮ್ಮ ದೇಶದ ವಿರುದ್ಧ ನಡೆದುಕೊಳ್ಳುವವರಿಗೆ ವಿಶ್ವದ ಯಾವುದೇ ಮೂಲೆಯಲ್ಲೂ ಸುರಕ್ಷಿತ ನೆಲೆ ಇಲ್ಲದಂತೆ ನೋಡಿಕೊಳ್ಳಬೇಕಿದೆ. ದೇಶದ ಹಿತಾಸಕ್ತಿಗಾಗಿ ನಾವು ದುಡಿಯೋಣ ಅಂತ ಮೋದಿ ಕರೆ ನೀಡಿದ್ದಾರೆ. ಇದು ತಲೆ ತಪ್ಪಿಸಿಕೊಂಡಿದ್ದ ದೇಶದ ಮಾಜಿ ಉದ್ಯಮಿಗಳ ಕುರಿತಾಗಿ ನೀಡಿದ ಹೇಳಿಕೆ ಅಂತ ವಿಶ್ಲೇಷಿಸಲಾಗ್ತಿದೆ.
ಇನ್ನು ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಮಾಡಿರೋ ವಂಚನೆಯಿoದಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಒಟ್ಟು 22,586 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಹೀಗಾಗಿ ತೀವ್ರ ನಷ್ಟ ಎದುರಿಸಿದ್ದ ಬ್ಯಾಂಕುಗಳಿಗೆ ಜಾರಿ ನಿರ್ದೇಶನಾಲಯ ಈಗಾಗಲೇ 8,441.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನುವರ್ಗಾಯಿಸಿದೆ.
ಇನ್ನು ವಂಚನೆ ಆರೋಪ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದಾಗಿ ಉದ್ಯಮಿ ವಿಜಯ್ ಮಲ್ಯ ಲಂಡನ್ ಗೆ ಪರಾರಿಯಾಗಿದ್ದಾರೆ. ವಿಜಯ್ ಮಲ್ಯಗೆ ಯುಕೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸುವುದು ಅಂತಿಮವಾಗಿದೆ.
ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರನ್ನು ಮುಂಬೈನ ಪಿಎಂಎ ನ್ಯಾಯಾಲಯ ಪರಾರಿಯಾದ ಆರ್ಥಿಕ ಅಪರಾಧಿಗಳೆಂದು ಈಗಾಗಲೇ ಘೋಷಣೆ ಮಾಡಿದೆ. ಇನ್ನು ವಜ್ರದ ಉದ್ಯಮಿ ಕೂಡ ಬಂಧನ ಭೀತಿಯಿಂದಾಗಿ ಮೆಹುಲ್ ಚೌಕ್ಸಿ ಡೊಮಿನಿಕಾ ದೇಶಕ್ಕೆ ಪರಾರಿಯಾಗಿದ್ದಾರೆ.
ಒಟ್ಟಾರೆ, ದೇಶಕ್ಕೆ ದ್ರೋಹ ಎಸಗುವವರು ವಿಶ್ವದ ಯಾವುದೇ ಮೂಲೆಯಲ್ಲಿರೋದಕ್ಕೂ ಅವಕಾಶ ಕೊಡೋದಿಲ್ಲ ಅಂತ ಹೇಳೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ತಲೆತಪ್ಪಿಸಿಕೊಂಡಿರೋ ಉದ್ಯಮಿಗಳ ಬಂಧನ ಕುರಿತಾಗಿ ಸುಳಿವು ನೀಡಿದ್ದಾರೆ.
ಬ್ಯೂರೋ ರಿಪೋರ್ಟ್- ಕರ್ನಾಟಕ ಟಿವಿ