Sunday, December 22, 2024

Latest Posts

ರಿಕ್ಷಾವಾಲಾಗೆ ಐಟಿ ಇಲಾಖೆ 3 ಕೋಟಿ ರೂ ಟ್ಯಾಕ್ಸ್ ಕಟ್ಟಲು ನೋಟೀಸ್..!

- Advertisement -

www.karnatakatv.net: ಆತ ದಿನನಿತ್ಯ ಹತ್ತಾರು ಮಂದಿ ಪ್ರಯಾಣಿಕರನ್ನ ಅವರು ಹೇಳಿದ ಜಾಗಕ್ಕೆ ತನ್ನ ರಿಕ್ಷಾಬಂಡಿಯಲ್ಲಿ ಕೂರಿಸಿಕೊಂಡು ಹೋಗಿ ಬಿಟ್ಟರೆ ಮಾತ್ರ ಅವನಿಗೆ ಅವತ್ತು ಊಟ ಸಿಗುತ್ತೆ. ಒಂದು ದಿನವಾದ್ರೂ ಮಿಸ್ ಆದ್ರೆ, ಅವನಿಗೂ ಆತನನ್ನು ನಂಬಿರೋ ಕುಟುಂಬಕ್ಕೂ ಅವತ್ತು ತಣ್ಣೀರು ಬಟ್ಟೆಯೇ ಗತಿ. ಹೀಗೆ ಕಷ್ಟವೋ ಸುಖವೋ ಜೀವನ ಸಾಗಿಸುತ್ತಿರೋ ಈ ಬಡ ರಿಕ್ಷಾವಾಲಾಗೆ ಇದೀಗ ಐಟಿ ಇಲಾಖೆ 3 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಬೇಕು ಅಂತ ನೋಟೀಸ್ ನೀಡಿದೆ.

ನೋಡೋದಕ್ಕೆ ಸಣಕಲು ದೇಹ.. ಇತನ ಬಳಿ ಈ ರಿಕ್ಷಾವೊಂದನ್ನು ಬಿಟ್ಟರೆ ತನ್ನದು ಅಂತ ಹೇಳ್ಕೊಳ್ಳೋದಕ್ಕೆ ಏನೂ ಇಲ್ಲ. ಪರಿಸ್ಥಿತಿ ಹೀಗಿರೋವಾಗ ಆದಾಯ ತೆರಿಗೆ ಇಲಾಖೆ ಈತನಿಗೆ ಕೋಟಿ ಕೋಟಿ ಟ್ಯಾಕ್ಸ್ ಕಟ್ಟಲೇಬೇಕು ಅಂತ ನೋಟೀಸ್ ನೀಡಿದೆ. ಅಂದಹಾಗೆ ಉತ್ತರಪ್ರದೇಶದ ಮಥುರಾದ ನಿವಾಸಿ ಪ್ರತಾಪ್ ಸಿಂಗ್ ಅನ್ನೋ ರಿಕ್ಷಾವಾಲಾ ಸದ್ಯ ಐಟಿ ಇಲಾಖೆ ಕೊಟ್ಟಿರೋ ಶಾಕ್ ಗೆ ಒದ್ದಾಡುತ್ತಿರೋ ವ್ಯಕ್ತಿ. ಇನ್ನು ತಿನ್ನೋದಕ್ಕೂ ಪರದಾಡೋ ಈ ವ್ಯಕ್ತಿಗೆ ಐಟಿ ಇಲಾಖೆ ಇದ್ಯಾಕೆ ಹೀಗೆ ನೋಟೀಸ್ ಕಳುಹಿಸಿದೆ ಅಂತ ಕೇಳಿದ್ರೆ ನೀವು ಶಾಕ್ ಆಗ್ತಿರಾ.

ಹೌದು, ಕಳೆದ ಮಾರ್ಚ್ ನಲ್ಲಿ ಪ್ರತಾಪ್ ಸಿಂಗ್ , ಬ್ಯಾಂಕ್ ನವರು ಪ್ಯಾನ್ ಕಾರ್ಡ್ ಕೇಳಿದ್ದರು ಅಂತ ಪ್ಯಾನ್ ಕಾರ್ಡ್ ಮಾಡಿಸೋದಕ್ಕೆ ಜನ್ ಸುವಿಧಾ ಕೇಂದ್ರಕ್ಕೆ ತಮ್ಮ ದಾಖಲೆಗಳನ್ನೆಲ್ಲಾ ನೀಡಿದ್ರು. ಬಳಿಕ ಬರೋಬ್ಬರಿ 3 ತಿಂಗಳ ವರೆಗೂ ಪ್ಯಾನ್ ಕಾರ್ಡ್ ಪಡೆಯೋದಕ್ಕೆ ಅಲೆದಾಡಿದ್ದಾರೆ. ಕಡೆಗೆ ಪ್ರತಾಪ್ ಸಿಂಗ್ ರವರಿಗೆ ಹೇಗೋ ಪ್ಯಾನ್ ಕಾರ್ಡ್ ಸಿಗುತ್ತೆ, ಇನ್ನು ಪ್ಯಾನ್ ಕಾರ್ಡ್ ಸಿಕ್ಕ ಧಾವಂತದಲ್ಲಿ ಪ್ರತಾಪ್ ಸಿಂಗ್ ಅದನ್ನು ಪಡೆದು ಮನೆಗೆ ವಾಪಸ್ಸಾಗಿದ್ದಾರೆ. ಇಷ್ಟೇ… ಇದಾದ ಬಳಿಕ ಅಕ್ಟೋಬರ್ 19ರಂದು ಪ್ರತಾಪ್ ಸಿಂಗ್ ಮನೆ ವಿಳಾಸಕ್ಕೆ ಐಟಿ ಇಲಾಖೆಯಿಂದ ನೋಟೀಸ್ ಬರುತ್ತೆ.
ಆ ನೋಟೀಸ್ ನಲ್ಲಿ ಏನಿದೆ ಅಂತ ತಿಳಿದುಕೊಂಡ ಈ ಬಡ ರಿಕ್ಷಾವಾಲಾ ಪ್ರತಾಪ್ ಸಿಂಗ್ ಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯ್ತು.. ಯಾಕಂದ್ರೆ ಆ ನೋಟೀಸ್ ನಲ್ಲಿ ಐಟಿ ಇಲಾಖೆ 3,47,54,896 ರೂಪಾಯಿ ಟ್ಯಾಕ್ಸ್ ಕಟ್ಟಬೇಕು ಅಂತ ತಿಳಿಸಿತ್ತು. ಅಲ್ಲದೆ 2019ರಲ್ಲಿ ತಮ್ಮ ಒಡೆತನದ ಸಂಸ್ಥೆಯಿoದ 43,44,36,201ರಷ್ಟು ವಹಿವಾಟು ನಡೆಸಿದ್ದು ಇದಕ್ಕೆ ಟ್ಯಾಕ್ಸ್ ಕಟ್ಟಬೇಕು ಅಂತ ನೋಟೀಸ್ ನಲ್ಲಿ ತಿಳಿಸಲಾಗಿದೆ.

ಇದರಿಂದ ಗಾಬರಿಗೊಂಡ ರಿಕ್ಷಾವಾಲಾ, ಅಕ್ಟೋಬರ್ 24 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ಯಾನ್ ಕಾರ್ಡ್ ನೀಡೋಕೆ ಅಂತ ನಾನು ಸಲ್ಲಿಸಿದ್ದ ನನ್ನ ದಾಖಲಾತಿಗಳನ್ನು ದುರ್ಬಳಕೆ ಮಾಡಿಕೊಂಡು ನನಗೆ ಈ ರೀತಿ ಯಾಮಾರಿಸಿದ್ದಾರೆ ಅಂತ ಪ್ರತಾಪ್ ಸಿಂಗ್ ಆರೋಪಿಸಿದ್ದಾರೆ. ಇನ್ನು ದಾಖಲಾತಿಗಳ ಪ್ರಕಾರ ಐಟಿ ಏನೋ ನೋಟೀಸ್ ನೀಡಿದೆ ಆದ್ರೆ, ಸದ್ಯ ಸತ್ಯಾಸತ್ಯತೆಯನ್ನು ಐಟಿ ಅಧಿಕಾರಿಗಳಿಗೆ ವಿವರಿಸಿರೋ ಪ್ರತಾಪ್ ಸಿಂಗ್ ಸದ್ಯ ದೂರು ನೀಡಿದ್ದು, ಈ ಬಡ ರಿಕ್ಷಾವಾಲಾನ ದಾಖಲೆಗಳನ್ನಿಟ್ಟುಕೊಂಡು ಐಟಿಗೆ ಚಳ್ಳೆಹಣ್ಣು ತಿನ್ನಿಸೋದಕ್ಕೆ ಯತ್ನಿಸಿರೋ ಆಸಾಮಿಗಳ ಪತ್ತೆಗೆ ಐಟಿ ಇಲಾಖೆ ಮುಂದಾಗಿದೆ.

- Advertisement -

Latest Posts

Don't Miss