www.karnatakatv.net: 15 ಸಾವಿರ ಕಂಪ್ಯೂಟರ್ ಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಗೆ ಇನ್ಫೋಸಿಸ್ ಕಾಣಿಕೆಯಾಗಿ ನೀಡಿದೆ.
ಇನ್ಫೋಸಿಸ್ ಸಂಸ್ಥೆ, ರೋಟರಿ ಸಂಸ್ಥೆ, ತಾಂತ್ರಿಕ ಶಿಕ್ಷಣ ಇಲಾಖೆಯ ನಡುವೆ ಒಡಂಬಡಿಕೆಗೆ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಅಶ್ವತ್ಥ್ ನಾರಾಯಣ ಸಹಿ ಮಾಡಿದ್ದಾರೆ. ಪ್ರತಿವರ್ಷ 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಪಯುಕ್ತವಾಗುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ರೀತಿಯಲ್ಲಿ ಮಹತ್ವದ ಪರಿವರ್ತನೆ ಉಂಟುಮಾಡುವ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಮುಂಚೂಣಿ ಐಟಿ ಕಂಪನಿ ಇನ್ಫೋಸಿಸ್ ಜತೆ ಸಹಿ ಹಾಕಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ಡಿ.ಸಿ.ಟಿ.ಇ. ಯ ‘ಹೆಲ್ಪ್ ಎಜುಕೇಟ್’ ಉಪಕ್ರಮದಡಿಯ ಈ ಒಡಂಬಡಿಕೆಯನ್ನು ವಿಧಾನಸೌಧದಲ್ಲಿ ವಿನಿಮಯ ಮಾಡಿಕೊಳ್ಳಲಾಯಿತು. ಸರ್ಕಾರದ ಪರವಾಗಿ ಡಿಸಿಟಿಇ ಆಯುಕ್ತ ಪಿ.ಪ್ರದೀಪ್ ಮತ್ತು ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷ ತಿರುಮಲ ಆರೋಹಿ ಅವರು ಒಪ್ಪಂದ ಪತ್ರಗಳಿಗೆ ಸಹಿ ಹಾಕಿದರು.
“ಈ ಒಪ್ಪಂದವು ಮೂರು ಭಾಗಗಳನ್ನು ಒಳಗೊಂಡಿದೆ. ಮೊದಲಿಗೆ, ಇನ್ಫೋಸಿಸ್ ಕಂಪನಿಯು ರೂ 35 ಕೋಟಿ ವೆಚ್ಚದಲ್ಲಿ ರೂಪಿಸಿರುವ ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಡಿಜಿಟಲ್ ವೇದಿಕೆಯಲ್ಲಿರುವ 3900ಕ್ಕೂ ಹೆಚ್ಚಿನ ಕೋರ್ಸ್ ಗಳು ಮತ್ತು 1.6 ಲಕ್ಷ ಕಲಿಕಾ ಸಂಪನ್ಮೂಲಗಳನ್ನು 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಚಿತವಾಗಿ ಲಭ್ಯವಾಗಿಸಲಿದೆ. ಎರಡನೆಯದಾಗಿ, ಕಂಪನಿಯು ಬೋಧಕರ ತರಬೇತಿಯಲ್ಲಿ ಸಹಕರಿಸಲಿದೆ. ಮೂರನೆಯದಾಗಿ, ಕಂಪನಿಯು 15,000 ಕಂಪ್ಯೂಟರುಗಳನ್ನು ದೇಣಿಗೆ ಕೊಡುವ ಮೂಲಕ ಕಾಲೇಜುಗಳ ಡಿಜಿಟಲ್ ಮೂಲಸೌಕರ್ಯವನ್ನು ಸದೃಢಗೊಳಿಸಲಿದೆ” ಎಂದು ವಿವರಿಸಿದರು.
ಸ್ಪ್ರಿಂಗ್ ಬೋರ್ಡ್ ಡಿಜಿಟಲ್ ವೇದಿಕೆಗಾಗಿ 35 ಕೋಟಿ ರೂಪಾಯಿ ವೆಚ್ಚ ಮಾಡಿರುವ ಇನ್ಫೊಸಿಸ್, ಮುಂದಿನ 5ರಿಂದ 10 ವರ್ಷಗಳ ಅವಧಿಯಲ್ಲಿ ಇನ್ನೂ 750 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಯೋಜನೆ ಹೊಂದಿದೆ ಎಂದೂ ಹೇಳಿದರು. ಈ ಒಡಂಬಡಿಕೆ ಏರ್ಪಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಇನ್ಫೊಸಿಸ್ ಸ್ಪ್ರಿಂಗ್ ಬೋರ್ಡ್ ಪ್ರೋಗ್ರಾಮ್ ಮ್ಯಾನೇಜರ್ ಕಿರಣ್ ಎನ್.ಜಿ. ಅವರು, ಉನ್ನತ ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು ಇದು ಉತ್ತೇಜನ ನೀಡುತ್ತದೆ ಎಂದರು. ಯುವ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ರಾಷ್ಟ್ರೀಯ ಶಿಕ್ಷಣ ನೀತಿಯು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.