www.karnatakatv.net: ಎಲ್ಲ ಶಿಕ್ಷಣ ಸಂಸ್ಥೆಗಳನ್ನು ನವೆಂಬರ್ 1ರಿಂದ ಪುನರಾರಂಭಿಸಲು ಮತ್ತು ಕೋವಿಡ್ ಮಾರ್ಗಸೂಚಿಯೊಂದಿಗೆ ಛತ್ ಪೂಜೆ ಆಚರಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಅನುಮತಿ ನೀಡಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನ.1ರಿಂದ ಶಾಲಾ, ಕಾಲೇಜುಗಳು ಆರಂಭವಾಗಲಿವೆ. ಶಾಲೆಗಳಲ್ಲಿ ಭೌತಿಕ ತರಗತಿಗಳ ಜೊತೆಗೆ, ಆನ್‌ಲೈನ್ ತರಗತಿಗಳನ್ನು ಮುಂದುವರಿಸುವoತೆ ಸೂಚಿಸಲಾಗಿದೆ’ ಎಂದರು. ‘ಶೇ 50ರಷ್ಟು ಮಕ್ಕಳಿಗೆ ಶಾಲೆಗಳಿಗೆ ಬರುವಂತೆ ಸೂಚಿಸಬೇಕು. ಆದರೆ ಪೋಷಕರಿಗೆ ಈ ವಿಷಯದಲ್ಲಿ ಒತ್ತಡ ಹೇರಬಾರದು. ಎಲ್ಲ ಶಿಕ್ಷಕರು ಕಡ್ಡಾಯವಾಗಿ ಎರಡೂ ಡೋಸ್‌ಗಳನ್ನು ಪಡೆದಿರಬೇಕು. ಲಸಿಕೆ ಹಾಕಿಸದವರು ಆದಷ್ಟು ಬೇಗ ಹಾಕಿಸಿಕೊಳ್ಳಬೇಕು ‘ ಎಂದು ತಿಳಿಸಿದರು.
ರಾಜಧಾನಿ ಪೂರ್ವನಿರ್ಧರಿತ ಸ್ಥಳಗಳಲ್ಲಿ ಛತ್ ಪೂಜೆ ನಡೆಸಲು ನಿರ್ಬಂಧಿತ ಸಂಖ್ಯೆಯ ಜನರಿಗೆ ಅವಕಾಶ ನೀಡಲಾಗುವುದು ಎಂದು ಸಿಸೋಡಿಯಾ ಹೇಳಿದರು. ದೆಹಲಿಯಲ್ಲಿ ಕೋವಿಡ್ ಸೊಂಕು ನಿಯಂತ್ರಣದಲ್ಲಿದ್ದು, ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲ ರೀತಿಯ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.