ಬೆಂಗಳೂರು: ರ‍್ಯಾಂಬೋ-2 ಚಿತ್ರದಲ್ಲಿ `ಚುಟು-ಚುಟು’.. ಹಾಗೂ `ಯವ್ವಾ ಯವ್ವಾ…’ ಹಾಡಿನ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ನಟ ಶರಣ್ ಹಾಗೂ ನಟಿ ಆಶಿಕಾ ರಂಗನಾಥ್ ಜೋಡಿ, ಇದೀಗ ಮತ್ತೆ ತೆರೆಯ ಮೇಲೆ ಮೋಡಿ ಮಾಡಲು ಸಜ್ಜಾಗಿದೆ. ಸಿಂಪಲ್ ಸುನಿ ನಿದೇರ್ಶನದ `ಅವತಾರ ಪುರುಷ’ದಲ್ಲಿ ಶರಣ್ ಗೇ ನಟನೆಯ ಪಾಠ ಮಾಡಿದ್ದಾರೆ ಆಶಿಕಾ. ಚಿತ್ರ ಡಿ.10ಕ್ಕೆ ತೆರೆಕಾಣಲಿದೆ.
ಸುಮಾರು ಎರಡು ವರ್ಷಗಳ ಬಳಿಕ ಶರಣ್ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ವೆಬ್‌ಸೀರಿಸ್‌ಗಾಗಿ ಸುನಿ ಸಿದ್ಧಪಡಿಕೊಂಡಿದ್ದ ಈ ಕಥೆಯನ್ನು ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಅವರು ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ಶರಣ್ ಅವರ ಹಾಸ್ಯ, ಸುನಿ ಅವರ ಡೈಲಾಗ್ಸ್ ಹಾಗೂ ಅರ್ಜುನ್ ಜನ್ಯಾ ಅವರ ಸಂಗೀತದ ಕಾಂಬಿನೇಷನ್ ಇದ್ದು, ಮನರಂಜನೆಗೇನೂ ಕೊರತೆ ಇಲ್ಲ ಎಂದಿದೆ ಚಿತ್ರತಂಡ. ಜ್ಯೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಶರಣ್ ಸುಮಾರು 10ಕ್ಕೂ ಹೆಚ್ಚು ಅವತಾಗಳನ್ನೆತ್ತಿ ಪ್ರಕ್ಷಕರಿಗೆ ನಗೆಯೂಟ ಬಡಿಸಿದ್ದಾರೆ.
`2019ರಲ್ಲಿ ನನ್ನ ಒಂದು ಸಿನಿಮಾ ರಿಲೀಸ್ ಅಗಿತ್ತು. ಈ ವರ್ಷವೂ ನನ್ನ ಯಾವುದೇ ಸಿನಿಮಾ ಇಲ್ಲ ಎಂದುಕೊAಡಿದ್ದೆ. ಆದರೆ ಕೊನೆಯಲ್ಲಿ ಒಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಕನ್ನಡದ ಅರ್ಧ ಚಿತ್ರರಂಗನೇ ಇದೆ. ಈ ಸಿನಿಮಾ ನನ್ನ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿದ್ದು, ನನ್ನ ಹಾಗೂ ಸುನಿಯ ಮೊದಲ ಕಾಂಬಿನೇಷನ್ ಇದು. ಇಲ್ಲಿ ನನ್ನ ತನವೂ ಇದೆ. ಶರಣ್ ನಗಿಸುತ್ತಾನೆ. ಮಾಟ, ಮಾಯ ಮಂತ್ರದ ಸುತ್ತ ಕಥೆ ಹೆಣೆಯಲಾಗಿದೆ.
`ಚುಟು-ಚುಟು…’ ಅಂತೆಯೇ ಇದರಲ್ಲೂ ಎರಡು ಹಾಡುಗಳಿವೆ’ ಎಂದರು ಶರಣ್.
`ಸುದೀರ್ಘವಾದ ಕಥೆಯಾದ ಕಾರಣ ಎರಡು ಭಾಗಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಎರಡನೇ ಭಾಗದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಮೊದಲ ಭಾಗ ಬಿಡುಗಡೆಯಾಗಿ 101ನೇ ದಿನಕ್ಕೆ ಎರಡನೇ ಭಾಗ ರಿಲೀಸ್ ಆಗಲಿದೆ. ಚಿತ್ರಕ್ಕೆ ಸುಮಾರು 20 ಕೋಟಿ ವೆಚ್ಚವಾಗಿದೆ’ ಎಂದಿದ್ದಾರೆ ಪುಷ್ಕರ ಮಲ್ಲಿಕಾರ್ಜುನಯ್ಯ.