ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ತೆಲುಗು ಚಿತ್ರರಂಗದವರು ಕಿಡಿ ಕಾರಿದ್ದಾರೆ. ಕೆಲ ದಿನಗಳ ಹಿಂದೆ ಮೆಗಾಸ್ಟಾರ್ ಚಿರಂಜೀವಿ ನೇತೃತ್ವದಲ್ಲಿ ತೆಲುಗು ಚಿತ್ರರಂಗದವರು ಜಗನ್ ಬಳಿ ಸಿನಿಮಾ ಟಿಕೇಟ್ ಬೆಲೆ ಏರಿಸಬೇಕು ಎಂದು ಕೇಳಿಕೊಂಡಿದ್ದರು. ಅವರ ಮನವಿಯನ್ನು ಸ್ವೀಕರಿಸಿದ ಜಗನ್, ಕೆಲ ದಿನಗಳ ಬಳಿಕ ಟಿಕೇಟ್ ದರವನ್ನು ಏರಿಸುವುದು ಬಿಟ್ಟು, ರಾಜ್ಯ ಸರ್ಕಾರವೇ ಸಿನಿಮಾ ಟಿಕೇಟ್‌ಗಳನ್ನ ಸೇಲ್ ಮಾಡುತ್ತೆ ಎಂದು ಆದೇಶಿಸಿದ್ದಾರೆ. ಇದಕ್ಕೆ ಕೋಪಗೊಂಡ ತೆಲುಗು ಚಿತ್ರರಂಗ ಜಗನ್ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ನಟ ಪವನ್ ಕಲ್ಯಾಣ್ ಕೂಡ ಜಗನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ತದನಂತರ ಸಿನಿಮಾ ಟಿಕೇಟ್ ದರ ಏರಿಕೆ ಮಾಡಲಾಗಿದೆ. ಆದರೂ ಕೂಡ ಚಿತ್ರರಂಗದ ಕೋಪ ತಣ್ಣಗಾಗಿಲ್ಲ. ಯಾಕಂದ್ರೆ ಮಲ್ಟಿಫ್ಲೆಕ್ಸ್ನಲ್ಲಿ, ಡಿಲಕ್ಸ್ ವಿಭಾಗದಲ್ಲಿ, ಎಕಾನಮಿ ಕ್ಲಾಸ್‌ನಲ್ಲಿ ಬೇರೆ ಬೇರೆ ದರ ಇರಿಸಲಾಗಿದೆ. ಕಾರ್ಪೋರೇಷನ್, ಮುನ್ಸಿಪಾಲಿಟಿ , ಪಂಚಾಯಿತಿ ವ್ಯಾಪ್ತಿ ಹೀಗೆ ಆಯಾ ವ್ಯಾಪ್ತಿಗೆ ತಕ್ಕಂತೆ ಟಿಕೇಟ್ ದರ ಏರಿಸಲಾಗಿದೆ. ಆದ್ರೆ ಆ ದರ ಏರಿಕೆಯೂ ಕಡಿಮೆ ಇದೆ ಅನ್ನೋದು ತೆಲುಗು ಚಿತ್ರರಂಗದ ಸಿಟ್ಟಿಗೆ ಕಾರಣವಾಗಿದೆ.
ಅಲ್ಲದೇ, ಸರ್ಕಾರದ ಆದೇಶ ಮೀರಿ ಹೆಚ್ಚು ರೇಟಿಗೆ ಟಿಕೇಟ್ ಮಾರಿದರೆ, ಕಠಿಣ ಶಿಕ್ಷೆ ಮಾಡಲಾಗುವುದೆಂದು ಆದೇಶಿಸಲಾಗಿದೆ. ಹೆಚ್ಚು ಅಂದ್ರೆ 250 ರೂಪಾಯಿ ಮತ್ತು ಕಡಿಮೆ ಅಂದ್ರೆ 5 ರೂಪಾಯಿ ಟಿಕೇಟ್ ಬೆಲೆ ಇಡಲಾಗಿದೆ. ಹೀಗೆ ಟಿಕೇಟ್ ದರ ಏರಿಸಿದ್ರೆ, ನಾವು ಹಾಕಿದ ಬಂಡವಾಳಕ್ಕೆ ಲಾಭ ಬರುವುದಿಲ್ಲವೆಂದು ತೆಲುಗು ಚಿತ್ರರಂಗ ಅಸಮಾಧಾನ ಹೊರಹಾಕಿದೆ. ಇನ್ನು ಈ ಆದೇಶವನ್ನು ವಿರೋಧಿಸಿ, ಕೋರ್ಟ್ ಮೆಟ್ಟಿಲೇರಲು ಟಾಲಿವುಡ್ ನಿರ್ಧರಿಸಿದೆ.

