ಬೆಂಗಳೂರು: ಇಂದು ಕೂಡ ಎಸಿಬಿ ಅಧಿಕಾರಿಗಳು ತಮ್ಮ ದಾಳಿಯನ್ನು ಮುಂದುವರೆಸಿದ್ದಾರೆ. ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ರಂಗನಾಥ್ ನಿವಾಸ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನಲ್ಲಿರುವಂತ ಹಿರಿಯ ಶ್ರೇಣಿಯ ಕೆ ಎಎಸ್ ಅಧಿಕಾರಿ, ಹಿಂದಿನ ಉಪ ವಿಭಾಗಾಧಿಕಾರಿಯಾಗಿದ್ದಂತ ಕೆ ರಂಗನಾಥ್, ಪ್ರಸ್ತುತ ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತರವರು ಅವರ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಇವರ ವಿರುದ್ಧ ಈ ಹಿಂದೆ ಬೆಂಗಳೂರು ಉತ್ತರ ತಾಲ್ಲೂಕು ಉಪವಿಭಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯ ಕೇವಲ ಮೂರು ದಿನಗಳಲ್ಲಿ ಗೋಮಾಳ/ಸರ್ಕಾರ ಸುರ್ಪದಿಯಲ್ಲಿದ್ದ ಜಮೀನಿಗೆ ಸಂಬಂಧಿಸಿದಂತೆ ಮೂಲ ಮಂಜೂರಾತಿ ದಾಖಲೆಗಳ ನೈಜತೆಯನ್ನು ಪರಿಶೀಲನೆ ಮಾಡದೇ, ಸಂಬಂಧಪಟ್ಟ ತಹಶೀಲ್ದಾರ್ ರವರಿಂದ ಯಾವುದೇ ವರದಿಯನ್ನು ಪಡಯದೇಯೇ ನಿಯಮಬಾಹಿರವಾಗಿ, ಭೂಮಾಫಿಯದವರೊಂದಿಗೆ ಶಾಮೀಲಾಗಿ ಖಾಸಗಿ ವ್ಯಕ್ತಿಗಳಿಗೆ ಜಮೀನಿನ ಪರಭಾರೆಯನ್ನು ಮಾಡಿಕೊಟ್ಟಿರುವ ಕುರಿತಂತೆ ಕಾನೂನು ಕ್ರಮ ಜರುಗಿಸಲು ಸರ್ಕಾರವು ಆದೇಶಿಸಿರುವ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯಲ್ಲಿ ಸದರಿಯವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.
ಇಂದು ಎಸಿಬಿ ಬೆಂಗಳೂರು ನಗರ ಠಾಣೆಯ ಒಟ್ಟು 42 ಜನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ 5 ತಂಡಗಳಿಂದ ಕೆ.ರಂಗನಾಥ್, ಕೆ.ಎ.ಎಸ್ ರವರ ನ್ಯಾಯಾಂಗ ಬಡವಾಣೆಯಲ್ಲಿನ ವಾಸದ ಮನೆ, ದೊಡ್ಡಬಳ್ಳಾಪುರ ಟೌನ್ ದತ್ತಾತ್ರೇಯ ಕ ಲ್ಯಾಣ ಮಂಟಪ ರಸ್ತೆಯಲ್ಲಿನ ವಾಸದ ಮನೆ, ಇವರಿಗೆ ಸೇರಿದ ದೊಡ್ಡಬಳ್ಳಾಪುರ ಟೌನ್ ಕನಕ ಶ್ರೀ ಟ್ರಸ್ಟ್ ಕಛೇರಿ & ಅಕ್ಷರ ಪಬ್ಲಿಕ್ ಶಾಲೆ ಹಾಗೂ ನಾಗರಭಾವಿಯಲ್ಲಿನ ಇವರ ಸಂಬಂಧಿಕರ ವಾಸದ ಮನೆ ಮತ್ತು ಇವರು ಈ ಹಿಂದೆ ಕರ್ತವ್ಯ ನಿರ್ವಹಿಸಿರುವ ಬೆಂಗಳೂರು ಉತ್ತರ ತಾಲ್ಲೂಕು ಉಪವಿಭಾಧಿಕಾರಿ ಕಛೇರಿ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯವನ್ನು ಕೈಗೊಳ್ಳಲಾಗಿದೆ.




