ಬೆಂಗಳೂರು: ರಾಜ್ಯ ಹೈಕೋರ್ಟ್ ನೀಡಿರುವಂತ ಹಿಜಾಬ್ ಕುರಿತಾದಂತ ತೀರ್ಪಿನ ಆದೇಶವನ್ನು ಎಲ್ಲರೂ ಪಾಲಿಸಬೇಕು. ಕೋರ್ಟ್ ಆದೇಶ ಉಲ್ಲಂಘಿಸಿದ್ರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇಂದು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಗೊಂಡಿದೆ. ಸುಮಾರು 8.70 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 45 ಸಾವಿರ ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಆಗದಂತೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಹಿಜಾಬ್ ವಿಚಾರದಲ್ಲಿ ಕೋರ್ಟ್ ಆದೇಶವನ್ನ ಎಲ್ಲರು ಪಾಲಿಸಬೇಕು. ಕೋರ್ಟ್ ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸುತ್ತೇವೆ. ವಿದ್ಯಾರ್ಥಿಗಳು ಶಾಂತಿಯಿಂದ, ನಿರ್ವಿಘ್ನರಾಗಿ ಪರೀಕ್ಷೆ ಬರೆಯಲಿ ಎಂದರು.




