ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪತ್ನಿ ಚೆನ್ನಮ್ಮಗೆ ಆಸ್ತಿ ವಿವರ ಸಲ್ಲಿಸುವಂತೆ ಐಟಿ ಇಲಾಖೆಯಿಂದ ನೋಟಿಸ್

ಬೆಂಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮಗೆ, ಆಸ್ತಿ ವಿವರದ ಮಾಹಿತಿ ನೀಡುವಂತ ಐಟಿ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಸ್ವತಹ ಈ ಬಗ್ಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರೇ ಸ್ಪಷ್ಟ ಪಡಿಸಿದ್ದು, ಐಟಿ ಇಲಾಖೆಯ ನಡೆಗೆ ಗರಂ ಆಗಿದ್ದಾರೆ.

ಈ ಬಗ್ಗೆ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಮ್ಮ ತಾಯಿಗೆ ಐಟಿ ಇಲಾಖೆಯಿಂದ ಆಸ್ತಿ ವಿವರದ ಮಾಹಿತಿ ನೀಡುವಂತೆ ನೋಟಿಸ್ ನೀಡಲಾಗಿದೆ. ನಾವೇನ್ ಕೋಟಿ ಕೋಟಿ ಅಕ್ರಮ ಸಂಪಾದಿಸಿದ್ದೇವಾ.? ಆಲೂಗಡ್ಡೆ, ಕಬ್ಬು ಬೆಳೆದು ಸಂಪಾದಿಸಿರೋದು ಎಂದು ಕಿಡಿಕಾರಿದರು.

ಆರ್ ಟಿ ಒ ಅಧಿಕಾರಿಗಳು ಕೋಟಿ ಕೋಟಿಗಿದ್ದಾರೆ. ಅವರು ಕೆಲಸಕ್ಕೆ ಸೇರುವ ಮೊದಲು, ಸೇರಿದ ನಂತ್ರ ಎಷ್ಟು ಕೋಟಿಗಿದ್ದಾರೆ ಎಂಬುದಾಗಿ ನೋಟಿಸ್ ಕೊಟ್ಟು ಪ್ರಶ್ನಿಸಲಿ. ಅದನ್ನು ಬಿಟ್ಟು ನಮಗಲ್ಲ. ನಮಗೆ ಐಟಿ ಇಲಾಖೆಯಿಂದ ನೋಟಿಸ್ ಬಗ್ಗೆ ಭಯವಿಲ್ಲ. ನ್ಯಾಯಯುತವಾಗಿ ಇದ್ದೇವೆ. ಸೂಕ್ತ ರೀತಿಯಲ್ಲಿ ಉತ್ತರ ನೀಡುತ್ತೇವೆ. ಆದ್ರೇ ಜೆಡಿಎಸ್ ಪಕ್ಷದವರನ್ನು ಗುರುತಿಸಿ ನೋಟಿಸ್ ಕೊಡ್ತಾ ಇರೋದು ಯಾಕೆ ಎಂದರು.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ನಮ್ಮ ತಾಯಿಗೆ ಈ ಇಳಿ ವಯಸ್ಸಿನಲ್ಲಿ ಆದಾಯ ತೆರಿಗೆ ಇಲಾಖೆಯವರು ಆಸ್ತಿ ವಿವರ ಮಾಹಿತಿ ನೀಡುವಂತೆ ನೋಟಿಸ್ ನೀಡಿದ್ದಾರೆ. ನಾವು ಭಯಪಡೋದಿಲ್ಲ. ಐಟಿ ಅಧಿಕಾರಿಗಳು ಕೇಳಿದಂತ ಎಲ್ಲಾ ಮಾಹಿತಿಯನ್ನು ಒದಗಿಸಲಾಗುತ್ತದೆ ಎಂದರು.

About The Author