ಹಾವೇರಿ: ಕನ್ನಡ ನಾಡು ಶಾಂತಿ, ನೆಮ್ಮದಿ, ಸೌಹಾರ್ದತೆಯಿಂದ ಕೂಡಿರಬೇಕು. ಯಾವುದೇ ಜಾತಿ ಧರ್ಮಗಳ ಬೇಧ ಭಾವವಿಲ್ಲದೇ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯಲು ಎಲ್ಲರೂ ಒಂದಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಶಿಗ್ಗಾಂವ್ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಶ್ರೀ ರೇವಣಸಿದ್ಧೇಶ್ವರ ಪಟ್ಟಾಭಿಷೇಕ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅತ್ಯಂತ ಸಂತೋಷ ತಂದಿದೆ. ರಾಜ್ಯದ ಪ್ರಗತಿಗಾಗಿ ದಾಖಲೆಯ ಬಜೆಟ್ ನೀಡಲಾಗಿದೆ ಎಂದರು.
ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭವೃದ್ಧಿಗೆ ವಿಶೇಷ ಒತ್ತು ನೀಡಿದ್ದು, ಮಹಿಳಾಭಿವೃದ್ಧಿ ಕಾರ್ಯಕ್ರಮಗಳಿಗೆ 43 ಸಾವಿರ ಕೋಟಿ ರೂ,ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ಅಂಗನವಾಡಿ ಯೋಜನೆಗಳಿಗೆ 40 ಸಾವಿರ ಒದಗಿಸಲಾಗಿದೆ. ರೈತರ ಮಕ್ಕಳು ಶಿಕ್ಷಣ ಪಡೆದು ಸ್ವಾಭಿಮಾನದ ಬದುಕು ನಡೆಸಲು 6 ಲಕ್ಷ ಕುಟುಂಬಗಳಿಗೆ ವಿದ್ಯಾ ನಿಧಿ ಯೋಜನೆ ನೀಡಲಾಗಿದ್ದು, ಈ ವರ್ಷ 10 ಲಕ್ಷ ರೈತ ಕುಟುಂಬಗಳಿಗೆ ವಿದ್ಯಾನಿಧಿ ಯೋಜನೆ ನೀಡುವ ಗುರಿಯಿದೆ. ಹಾಲು ಉತ್ಪಾದಕರಿಗೆ ಆರ್ಥಿಕ ಸಹಾಯ ನೀಡಲು 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ಸಾಲವನ್ನು ನೀಡಲಾಗುತ್ತಿದೆ. 3500 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಮಾಡಲಾಗುತ್ತಿದೆ ಎಂದರು.
ಸರ್ವೇ ಜನಾ: ಸುಖಿನೋ ಭವಂತು ಎಂದು ನಂಬಿರುವ ಸರ್ಕಾರ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ನವಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣದ ಧ್ಯೇಯದಿಂದ ಸರ್ಕಾರ ದುಡಿಯುತ್ತಿದೆ. ಶ್ರೀಮಠಗಳು ಶಿಕ್ಷಣ ಹಾಗೂ ಸಾಮಾಜಿಕ ಕಾರ್ಯಗಳಿಗೆ ಸರ್ಕಾರ ಸದಾ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.




